ಕುರುಡು ನಾಯಿ ತಾ ಸಂತೆಗೆ ಬಂತಂತೆ
(ರಾಗ ಪೂರ್ವಿ ಆದಿತಾಳ)
ಕುರುಡು ನಾಯಿ ತಾ ಸಂತೆಗೆ ಬಂತಂತೆ
ಅದು ಏತಕೆ ಬಂತೋ ||ಪ||
ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ
ಹೆಂಡಿರ ಮಕ್ಕಳ ನೆಚ್ಚಿತಂತೆ
ಕೊಂಡು ಹೋಗುವಾಗ ಯಾರಿಲ್ಲವಂತೆ ||
ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ
ಮರೆತರಿನ್ನು ವ್ಯರ್ಥವಂತೆ
ನರಕದೊಳಗೆ ಬಿದ್ದಿತಂತೆ ||
ವೇದವಾದಗಳನೋದಿತಂತೆ
ಗಾದೆ ಮಾಡಿ ಬಿಟ್ಟಿತಂತೆ
ಹಾದಿ ತಪ್ಪಿ ನಡೆದು ಯಮನ
ಬಾಧೆಗೆ ತಾ ಗುರಿಯಾಯಿತಂತೆ ||
ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ
ಕಾನನಕಾನನ ತಿರುಗಿತಂತೆ
ತಾನು ತನ್ನನೆ ಮರೆಯಿತಂತೆ ||
ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ
ರಂಗ ಪುರಂದರವಿಠಲನ ಮರೆತು
ಭಂಗ ಬಹಳ ಪಟ್ಟಿತಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments