ಈ ಮಹಿಯೊಳಗೆ ಗುರುಗಳೆನಿಪರೆಲ್ಲ
(ರಾಗ ಮುಖಾರಿ ಝಂಪೆತಾಳ )
ಈ ಮಹಿಯೊಳಗೆ ಗುರುಗಳೆನಿಪರೆಲ್ಲ ,ನಮ್ಮ
ಶ್ರೀ ಮದಾಚಾರ್ಯ ಗುರುಶಿಖರಮಣಿಗೆ ಸರಿಯೆ ||ಪ||
ಈಯಖಿಲಜಗದೊಡೆಯ ಎಂಟು ಗುಣ ಶ್ರುತಿ ಪೌರು-
ಷೇಯ ಎಂಬೀ ಕುಶಾಸ್ತ್ರಿಗಳೆಲ್ಲರು
ಶ್ರೀಯರಸ ಪೂರ್ಣಗುಣ ಶ್ರುತಿ ನಿತ್ಯವೆಂಬ ಸ-
ನ್ನ್ಯಾಯರತ್ನಾಕರಾನಂದತೀರ್ಥರಿಗೆಣೆಯೆ ||
ದೈವವಿಲ್ಲವು ವಿಶ್ವ ಜೀವ ಕರ್ತೃಕವೆಂಬ
ದೈವಹೀನರು ದುರ್ಮತದ ಗುರುಗಳ
ದೈವವುಂಟು ಜಗಕೆ ಕರ್ತೃವೆಂಬ ಪ್ರಮಾ-
ಣಾವಳಿಯೊಳರಸ ಪೂರ್ಣಪ್ರಜ್ಞರಿಗೆಣೆಯೆ ||
ಜ್ಞಾನಕೊಂದೊಂದೆರಡು ಶಾಸ್ತ್ರವ ರಚಿಸಿ ಭ್ರಮದ
ಜ್ಞಾನದಿಂದಲಿ ಹೀನಮನುಜರೆಲ್ಲ
ನಾನಾ ನಿಗಮಶಾಸ್ತ್ರನವ್ಯಜಲರುಹ ಚಂಡ-
ಭಾನುವೆನಿಸಿದ ದಶಪ್ರಮತಿಗುರುಗಳಿಗೆಣೆಯೆ ||
ಗುರುಗಳೆನಿಸಿಕೊಂಬ ಭರದಲನ್ಯೋನ್ಯ ಮ-
ತ್ಸರದ ಶಾಸ್ತ್ರ ವಿರಚಿಪ ಸಡಗರೆಲ್ಲ
ಗುರುಪುರಂದರವಿಠಲ ಪರಿತುಷ್ಟಿಗಾಗಿ ಸುಜ-
ನರ ಪೊರೆವ ಗುರು ನಂದತೀರ್ಥರಿಗೆಣೆಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments