ಕೊಡುವುದೆಂದು ಎನ್ನ ಕೊಂಬುವುದೆಂದು

ಕೊಡುವುದೆಂದು ಎನ್ನ ಕೊಂಬುವುದೆಂದು

(ರಾಗ ಪೂರ್ವಿ ಅಟತಾಳ) ಕೊಡುವುದೆಂದು ಎನ್ನ ಕೊಂಬುವುದೆಂದು ಕೈ- ಪಿಡಿವುದೆಂದು ನೀನೊಲಿವುದೆಂದು || ಕೊಡುಕೊಂಬೊ ಮಹದನುಗ್ರಹದವನೆಂದು ನಿ- ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ....||ಪ || ಶ್ವಾನ ಸೂಕರ ಜನ್ಮ ನಾನುಂಬೆನೆನ್ನಲ್ಲಿ ನೀನೆ ತದ್ರೂಪನಾದೆಯಲ್ಲ ಹೀನರೊಳ್ನಾನತಿಹೀನನಾಗಿ ಅಭಿ- ಮಾನಿಯಾಗಿ ಕಾಲ ಕಳೆದೆನಲ್ಲ ವಾನರನಂಗಯ್ಯ ಮಾಣಿಕ್ಯದಂತೆನ್ನ ಮಾನದಂತರ್ಯಾಮಿ ಸಿಕ್ಕಿದೆಯಲ್ಲ ಏನಾದರು ನಿನ್ನೊಳು ಎನಗೆ ಮುಂದೆ ಜ್ಞಾನಭಕ್ತಿವೈರಾಗ್ಯ ಭಾಗ್ಯವನ್ನು || ಕಾಡಿನ ಮೃಗವು ಹಾಡಿದರೆ ನಂಬಿ ಆಡುವುದಲ್ಲದೆ ಓಡುವುದೆ ಗಾಡಿಪ್ಪ ಪಶುವಿನ ಬಾಲವ ಕಟ್ಟಿಸಿ ಕೂಡೆ ಪಾಲ್ಗರೆಯಲು ದಬ್ಬುವುದೆ ಆಡುವ ಶಿಶು ತಪ್ಪು ಮಾಡಲು ಜನನಿ ಕೊಂ- ಡಾಡುವಳಲ್ಲದೆ ದೂಡುವಳೆ ಮೂಢಬುದ್ಧಿಯೊಳ್ ಕೆಟ್ಟೆನೆಂದು ಕೋಪ ಮಾಡಬೇಡ ದಯಮಾಡಿ ನೀಡಿಷ್ಟವ || ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ ನಿನ್ನ ಸೇರುವ ಯತ್ನಬಿಟ್ಟು ನಾನು ಹೆಣ್ಣು ಹೊನ್ನು ಮಣ್ಣಿಗಾಗಿ ನಾ ಭ್ರಮೆಗೊಂಡು ಸುಣ್ಣಕಿಕ್ಕಿದ ನೀರಿನಂತಾದೆನೊ ಎನ್ನಪರಾಧ ಅನಂತ ಕ್ಷಮಿಸು ನೀ ಮನ್ನಿಸದಿರ್ದರಾರಿಗೆ ಪೇಳ್ವೆನೊ ಓ ನಮೋ ಶ್ರೀಹರಿಯೆಂಬ ಪೂರ್ಣಜ್ಞಾನ- ವನ್ನು ಪುರಂದರವಿಠಲ ಎನ್ನಪ್ಪನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು