ಕೇಳೆ ಗೋಪಿ ಎನ್ನಕೂಡೆ ಈ ಕೃಷ್ಣ ಆಡುವ ಮಾತುಗಳ
(ರಾಗ ಸೌರಾಷ್ಟ್ರ ಆದಿತಾಳ)
ಕೇಳೆ ಗೋಪಿ ಎನ್ನಕೂಡೆ ಈ ಕೃಷ್ಣ ಆಡುವ ಮಾತುಗಳ ||ಪ||
ಸೂಳೆಗಾರನಂತೆ ವೀಳ್ಯವ ಕೊಟ್ಟು ವೇಳೆವೇಳೆಗೆ ಬರಹೇಳಿದ ||ಅ||
ಪುಟ್ಟಪುಟ್ಟ ಕೈಯ ಗಟ್ಟಿ ಬೆಣ್ಣೆಯ ಮುದ್ದೆ ಎಷ್ಟು ಬೇಕೆಂದರೆ
ಬಟ್ಟ ಕುಚಂಗಳ ಕೈಲಿ ಪಿಡಿದು ಇದರಷ್ಟು ಬೇಕೆಂದನೆ ||
ಚಿಕ್ಕವನೆಂದು ತರ್ಕಿಸಿಕೊಂಡರೆ ಪಕ್ಕಗಳೆರಡು ಬಿಟ್ಟು
ಹೊಕ್ಕುಳ ಕೆಳಗೆ ಬಿಕ್ಕಿಲಿ ಗಿಲಿಪ್ಪ ಮಕ್ಕಳೆಲ್ಲಾದರುಂಟೆ ||
ಬಾಲಕನೆಂದು ಲಾಲಿಸಿ ಕರೆದರೆ ಲೋಲಾಡುತಲಿ ನಿಂತು
ಹಾಲುತುಪ್ಪವ ಕುಡಿದು ಸೀರೆಗೆ ಒರೆಸಿ ಮೂಲೆಗೆ ಕೈ ಚಾಚಿದ ||
ಎಲ್ಲ ಬೆಣ್ಣೆಯ ಮೆದ್ದು ನಮಗಿಷ್ಟು ಕೊಡೆಂದರೆ ನಿಲ್ಲುನಿಲ್ಲೆಂದು
ಎಲ್ಲ ಬೆಣ್ಣೆಯ ಮೆದ್ದು ಚೆನ್ನಾಗಿ ಬುಲ್ಲಿಯ ತೋರಿದ ||
ಉಡಿಯ ಸೀರೆಯ ಬಿಚ್ಚಿ ದಡದ ಮೇಲಿಟ್ಟು ಮಡುವಿನೊಳು ಮೈತೊಳೆಯೆ
ತಡವಾಯಿತೆಂದು ಉಟ್ಟ ಸೀರೆಯ ಕೊಂಡು ಕಡಹದ ಮರನೇರಿದ ||
ಬತ್ತಲಾಗಿದ್ದೆವು ಹಸ್ತವ ಮುಚ್ಚಿದೆವು , ಇತ್ತ ನೀ ನೋಡದಿರೊ
ಹತ್ತಿಲಿ ಬಂದು ಹಸ್ತವ ಮುಗಿದರೆ ವಸ್ತ್ರವ ಕೊಡುವೆನೆಂದ ||
ಗಾಡಿಗಾರ ರಂಗ ಗೋಡೆಯ ದಾಟಿ ಬಂದು ಆಡುತಲೆ ನಿಂತನೆ
ಮಾಡಬಾರದ ಕೆಲಸ ಮಾಡಿ ಪುರಂದರವಿಠಲರಾಯ ಓಡಿ ಹೋದನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments