ಇರಬೇಕು ಹರಿದಾಸರ ಸಂಗ

ಇರಬೇಕು ಹರಿದಾಸರ ಸಂಗ

(ರಾಗ ಕಾಂಭೋಜ ಅಟತಾಳ) ಇರಬೇಕು ಹರಿದಾಸರ ಸಂಗ ಪರಮ ಜ್ಞಾನಿಗಳ ಸಂಪಾದಿಸಬೇಕು ||ಪ|| ಅತಿಜ್ಞಾನಿಯಾಗಬೇಕು , ಹರಿಕಥೆ ಕೇಳಬೇಕು ಯತಿಗಳ ಪಾದಕ್ಕೆ ಎರಗಬೇಕು ಸತಿಸುತರಿರಬೇಕು , ಅತಿಮೋಹ ಬಿಡಬೇಕು ಮತಿಯೊಂದು ಬಿಡದೆ ಹರಿ ಪೂಜಿಪರ ಸಂಗ || ನಡೆಯಾತ್ರೆ ಎನಬೇಕು , ನುಡಿನೇಮವಿರಬೇಕು , ಬಿಡದೆ ಹರಿಪೂಜೆಯ ಮಾಡಬೇಕು ಅಡಿಗಡಿಗೆ ನೆನೆಬೇಕು , ಹರಿಗಡ್ಡ ಬೀಳಬೇಕು ಬಿಡದೆ ಹರಿಭಜನೆ ಮಾಡುವರ ಸಂಗ || ಸುರಹರವಿರಿಂಚಿಗಳ ಪರಿಯ ತಿಳಿಯಲುಬೇಕು ತಾರತಮ್ಯ ಪಂಚಭೇದ ತತ್ವನಿರತ ಅರಿಯದಿದ್ದರೆ ಗುರುಹಿರಿಯರನೆ ಕೇಳಬೇಕು ಪರಮಾನಂದದಿ ಲೋಲಾಡುವರ ಸಂಗ || ಷಟ್ಕರ್ಮ ಮಾಡಬೇಕು , ವೈಷ್ಣವನೆನಿಸಬೇಕು ವಿಷ್ಣುದಾಸರ ದಾಸನಾಗಬೇಕು ಉತ್ಕೃಷ್ಟ ವೈರಾಗ್ಯ ಬೇಕು , ದುಷ್ಟಸಂಗ ಬಿಡಬೇಕು ಎಷ್ಟು ಕಷ್ಟ ಬಂದರು ವಿಷ್ಣುಭಜಿಪರ ಸಂಗ || ಏಕಾಂತ ಕೊಡಬೇಕು , ಲೋಕವಾರ್ತೆ ಬಿಡಬೇಕು ಲೋಕೈಕನಾಥನ ಭಜಿಸಬೇಕು ಸಾಕು ಸಂಸಾರವೆಂದು ಕಕುಲಾತಿ ಬಿಡಬೇಕು ಶ್ರೀಕಾಂತ ಪುರಂದರವಿಠಲದಾಸರ ಸಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು