ಯಮನ ಶಾಸನ ಕೇಳೊ ಜೀವ
( ರಾಗ ಯದುಕುಲಕಾಂಭೋಜ. ಅಟ ತಾಳ)
ಯಮನ ಶಾಸನ ಕೇಳೊ ಜೀವ ಇದು
ಸಂಶಯವಿಲ್ಲೆಂದು ಎಣಿಸು ಸ್ವಭಾವ ||ಪ||
ಪರ ಸತಿಯರ ನೋಡಿದವಗೆ ಪತ್ತು
ಕೊರಡು ಕೆಂಪಗೆ ಕಾಸಿ ಕುಕ್ಕಿ ಕಣ್ಣೊಳಗೆ
ಎರಡು ಗುಡ್ಡನು ಪೀಕೋರವಗೆ ಸೀಸವ
ಕರಗಿಸಿ ಪೊಯ್ಯುವರೊ ಅವನ ಕಿವಿಯೊಳಗೆ ||
ಅನ್ಯಸ್ತ್ರೀಪುರುಷರ ಸಂಗ
ತನ್ನವರ ಕುಲ ಅಳಿಸಿಟ್ಟು ಹಾಕುವರಂಗ
ನರಕಕ್ಕೆ ಗುರಿ ಮಾಡಿ ತುಂಗ
ಕೆಂಡ ಉರಿವ ಉಕ್ಕಿನ ಕಂಭ ಕಟ್ಟಿಪ್ಪ ಭಂಗ ||
ಪರಸತಿ ಮೆರೆವೋದು ಕಂಡು ಗಾಣ
ಒರಳೊಳಗಾಡಿಸಿ ಒಣಗಿಸಿ ಬೆಂಡು
ಉರಿ ತೈಲದೊಳಗೆ ಹಾಕಿ ಗುಂಡು, ಕರಿದ
ತೆರನಾಗಿ ಹಂದಿಯ ತಿನಿಸುವ ಖಂಡು ||
ಅನ್ಯ ಸ್ತ್ರೀ ವಿಚಾರ ಮೋಹವಿಟ್ಟಿಹ
ಘನ್ನಘಾತಕಗೆ ಗಳರಂತೆನೀಹ
ಬೆನ್ನ ಚರ್ಮವ ಕಿತ್ತಿ ದೇಹ
ಕುಟ್ಟಿ ಘೋರಿಸಿ ಬಾಧಿಸಿ ಕಾಡಲಿಕ್ಕೆ ಬಹ ||
ಗಂಡನಿಂದಲಿ ಕೆಲಸ ಮಾಡಿ
ಕೊಂಡ ಹೆಂಡಿರಿಗೆ ಖಡುಹಿಡಿದವರ ಕಾಡಿ
ಮಂಡೆ ಕೂದಲು ಇನ್ನು ಕಿತ್ತೀಡಾಡಿ
ಖಂಡ ಖಂಡವ ಕಿತ್ತಿ ದಂಡಿಪ್ಪ ನೋಡಿ ||
ಅತಿಕಾಂಕ್ಷಸ್ತ್ರೀಯರಲ್ಲಿಂದ ಜನ್ಮದ
ಸದ್ಗತಿ ಕೇಳದೋ ಅತಿ ಕ್ರೂರದಿಂದ
ರಣಹದ್ದು ಗುಂಪು ಜತೆಯಿಂದ
ಪೀಡಿಪೀಡಿಸುವನು ಮುದದಿ ಮುಕುಂದ ||
ಇನ್ನು ಪಾಪಗಳ ನೀ ಮಾಡಬೇಡ
ಅನ್ಯರ ಗೊಡವೆಗೆ ನೀ ಹೋಗಬೇಡ
ಸಜ್ಜನರ ಸಂಗ ಬಿಡಬೇಡ
ಚೆನ್ನ ಪುರಂದರವಿಠಲನ್ನ ಭಜಿಸದಿರಬೇಡ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments