ನಾರಾಯಣನೆಂಬ ನಾಮವ ನೇಮದಿ

ನಾರಾಯಣನೆಂಬ ನಾಮವ ನೇಮದಿ

(ರಾಗ ಸೌರಾಷ್ಟ್ರ. ಅಟ ತಾಳ ) ನಾರಾಯಣನೆಂಬ ನಾಮವ ನೇಮದಿ ನೆನೆವುತಿರೆಚ್ಚರಿಕೆ||ಪ|| ನೀರ ಮೇಲಿನ ಗುಳ್ಳೆ ನರರೆಂಬ ಡಿಂಭವ ನಂಬದಿರೆಚ್ಚರಿಕೆ ||ಅ|| ಪರರು ಮಾಡಿದ ಪಾತಕಗಳುಚ್ಚರಿಸದೆ ನಾಲಿಗೆಗೆಚ್ಚರಿಕೆ ಗುರು ಹರಿಯರ ಸೇವೆ ಮಾಡದೆ ಉದರವ ಪೊರೆಯದಿರೆಚ್ಚರಿಕೆ ಹರಿದಿನದುಪವಾಸ ಇರುಳು ಜಾಗರವ ನೀ ಮರೆಯದಿರೆಚ್ಚರಿಕೆ ನರಹರಿಯಂಘ್ರಿಯ ಸ್ಮರಿಸದೆ ನರಸ್ತುತಿ ತರವಲ್ಲ ಎಚ್ಚರಿಕೆ || ಹೀನ ಮಾನಿನಿಯರ ಧ್ಯಾನ ಕಾನನದೊಳಗಿಳಿಯದಿರೆಚ್ಚರಿಕೆ ನಾನೆಂಬೊ ಅಹಂಕಾರ ಮಾಡಿ ನರಕದೊಳು ನರಳದಿರೆಚ್ಚರಿಕೆ ಜಾಹ್ನವಿ ಸ್ನಾನ ಸಂಧ್ಯಾನುಷ್ಠಾನ ಸುಜ್ಞಾನಕೇಳೆಚ್ಚರಿಕೆ ಜಾನಕೀರಮಣನ ಧ್ಯಾನವೆ ಧರ್ಮಸಂತಾನ ಮುಂದೆಚ್ಚರಿಕೆ || ಮಡದಿಮಕ್ಕಳೆಂಬೊ ಕಡುಮೋಹಕ್ಕೆ ಸಿಲುಕಿ ಕೆಡಬೇಡೆಚ್ಚರಿಕೆ ನಡೆವಾಗ ನುಡಿವಾಗ ಗಿಡವೆಲ್ಲ ನೆಂಟರು ಕಡೆಗಿಲ್ಲ ಎಚ್ಚರಿಕೆ ಕೊಡುಗಯ್ಯ ಮಾಡದೆ ಮಡಗಿದ ಧನ ಸಂಗಡ ಬಾರದೆಚ್ಚರಿಕೆ ದೃಢಭಕ್ತಿಯಿಂದಲಿ ಪುರಂದರವಿಠಲನ್ನ ನೆರೆನಂಬು ಎಚ್ಚರಿಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು