ನೀನ್ಯಾರು ಪೇಳೆನ್ನ ಕಣ್ಣಮುಚ್ಚಿದೆ
(ರಾಗ ಕಾಂಭೋಜ. ಆದಿ ತಾಳ )
ನೀನ್ಯಾರು ಪೇಳೆನ್ನ ಕಣ್ಣಮುಚ್ಚಿದೆ
ಮೌನಗೊಂಡರಿಯದಂತಿಹೆ ನಗುತಿ ||ಪ||
ಯಶೋದೆಯಲ್ಲಾಡುತಲ್ಲಾಡುತ
ಶಶಿಮುಖಿ ಬಂದು ಸೆರಗ ಪಿಡಿದು ನಿಂದು
ಪಶುವ ಕರೆಯೆ ಕಣ್ಣ ಮುಚ್ಚುತೊಂದು ಮಾತ
ಬೆಸಗೊಂಡಳೆ ಗೋಪಿ ನಗುತಲಿಂದು ||
ಗೊಲ್ಲರಿಗೆಲ್ಲ ನೀ ಬಲ್ಲಿದನೊ
ಎಲ್ಲ ಜೀವರ ಪ್ರಾಣದೊಲ್ಲಭನೊ
ಬಲ್ಲೆ ನಿನ್ನಯ ಪರಿಯೆಲ್ಲವನು, ನೀ-
ನೆಲ್ಲಿಂದ ಬಂದೆನ್ನ ಕಣ್ಣ ಮುಚ್ಚಿದೆ ||
ಆಪತ್ತಿಗೆ ನೆನೆಯೆ ಗೋಚರನೊ
ಪಾಪಸಂಹಾರ ಪುರುಷೋತ್ತಮನೊ
ಕೋಪದಿಂದಸುರರ ಕೊಂದವನೊ, ಸಾಂ-
ದೀಪನ ತನಯನ ತಂದಾತನೊ ||
ವರಗೋಕುಲದಿ ಉನ್ನತ ಸಿರಿಯೊ, ನೀ
ಬಿರುದಿನ ಸಂಚಾರದ ಕರಿಯೊ
ಪರಿವೇಷದಿಂದಿಪ್ಪ ದೊರೆಯೊ, ನೀ
ಮುರದೈತ್ಯನ ಮಡುಹಿದ ಹರಿಯೊ ||
ಅತಿ ಚೆಲುವಿಕೆ ರತಿಪತಿ ಪಿತನೊ ನೀ
ಶ್ರುತಿ ಸ್ಮೃತಿತತಿಗಳ ಸಮ್ಮತನೊ
ಚತುರ್ದಶಭುವನವಾಳುವ ದಾತನೊ, ಉ-
ನ್ನತ ಭಕುತಜನರಿಗ್ಹಿತನೊ ||
ಮಂಗಳ ಶೋಭನ ಶುಭತತಿಯೊ, ಗೋ-
ಪಾಂಗನೆಯರ ಮಾನ ಪ್ರಾಣಪತಿಯೊ, ವಿ-
ಹಂಗಮನೇರಿ ಮೆರೆವ ಮೂರ್ತಿಯೊ, ಹೇ
ಶೃಂಗಾರ ಸೊಬಗಿನ ಶ್ರೀಪತಿಯೊ ||
ಬೆಸಗೊಂಡಳು ಗೋಪಿ ಕುಶಲದಿ ತಾ
ಯಶೋದೆಗೆ ಶಿಶುರೂಪವಾಗಿ ತೋರುತ
ಅಸುರಾರಿ ಕಂಡು ಗೋಪಿ ನಸುನಗುತ, ಇಂದು
ಶಿಶುವ ಪುರಂದರವಿಠಲನೆನುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments