ಇಂದು ನಾನೇನು ಸುಕೃತವ ಮಾಡಿದೆನೊ
(ರಾಗ ಮಧ್ಯಮಾವತಿ ಏಕತಾಳ)
ಇಂದು ನಾನೇನು ಸುಕೃತವ ಮಾಡಿದೆನೊ
ಮಂಗಳಮಹಿಮ ವೆಂಕಟ ಬಂದ ಮನೆಗೆ ||ಪ||
ಹಾರ ಕೇಯೂರ ಹೊನ್ನುಂಗುರ ಬೆರಳ
ಹಾರದ ನಡುವೆ ಹಾಕಿದ ಏಳು ಪದಕ
ತೋರಮುತ್ತಿನ ಕಂಠಮಾಲೆ ಮಾಲಿಕೆಯ
ಮೇಲುಗಿರಿಯ ವೆಂಕಟ ಬಂದ ಮನೆಗೆ ||
ಎಸಳು ಸುತ್ತಿದ ಪಟ್ಟೆ ಎಸೆವ ಕಸ್ತೂರಿಯು
ಹಸನ ಸಣ್ಣ ನಾಮ ಸಾದೂತಿಲಕವು
ಕುಸುಮ ಮಲ್ಲಿಗೆ ಜಾಜಿ ಎಸೆವ ಸಂಪಿಗೆಯು
ವಸುಧೇಶ ಸೊಬಗ ವೆಂಕಟ ಬಂದ ಮನೆಗೆ ||
ಬಿಗಿದು ಸುತ್ತಿದ ಓಲೆ ಬಿಡು ಮುತ್ತಿನೊಂಟಿ
ಬಗೆಬಗೆಯುಂಗುರ ಧಗಧಗಿಸುತಲಿ
ಅಗಣಿತ ಹಸ್ತ ಕಂಕಣ ಹೊಳೆವುತಲಿ
ಜಗದೊಳಧಿಕನು ವೆಂಕಟ ಬಂದ ಮನೆಗೆ ||
ಪಿಡಿದ ಸುದರ್ಶನ ಎಡಗೈಯ ಶಂಖ
ಪಿಡಿದಿದ್ದ ಖಡ್ಗದಿ ಜಡರ ಮರ್ದಿಸುತ
ಉಡಿದಾರ ನಡುವೆ ಹೃದಯದೊಳು ಲಕ್ಷ್ಮೀ
ಬದವರ ಧ್ಯೇಯ ವೆಂಕಟ ಬಂದ ಮನೆಗೆ ||
ಬಾಲಚಂದ್ರನ ಪೋಲ್ವ ಓಲೆಕುಂಡಲವು
ಮೇಲು ಮಾಣಿಕ್ಯ ನವರತ್ನದುಂಗುರವು
ಕಾಲಲಂದುಗೆಯು ನವರತ್ನದ್ಹಾವುಗೆಯು
ಮೇಲುಗಿರಿವಾಸ ವೆಂಕಟ ಬಂದ ಮನೆಗೆ ||
ಇಂದಿರೆರಮಣ ನೀ ಎನ್ನ ಕುಲ ತಿಲಕ
ನಂದನ ಕಂದ ಮುಕುಂದ ಗೋವಿಂದ
ಬಂದೆನ್ನ ಪಾಪದ ಬಂಧನ ಪರಿಹರಿಸೊ
ಕಂದರ್ಪಜನಕ ವೆಂಕಟ ಬಂದ ಮನೆಗೆ ||
ಪಾಷಾಣರೂಪದ ಅಹಲ್ಯಾ ಶಾಪವನು
ಶೋಷಣೆ ಮಾಡಿದ ಸೊಬಗು ರೂಪಿನಲಿ
ಶೇಷಾಚಲಧೀಶ ಮಹಶೇಷಶಯನ
ದಾಸಪಾಲಕನು ವೆಂಕಟ ಬಂದ ಮನೆಗೆ ||
ಹೊಳೆವ ಪೀತಾಂಬರ ಉಡುಗೆ ಕಠಾರಿ
ಹೊಳೆವ ಕಂಗಳ ನೋಟ ಹೊಸ ಪಂಚಬಾಣ
ವೀಳ್ಯದ ಬಾಯ ಕರ್ಪೂರ ಕರಡಿಗೆಯು
ಚೆಲುವ ಶರೀರ ವೆಂಕಟ ಬಂದ ಮನೆಗೆ ||
ಗರುಡನನೇರಿ ಮೂಜಗವ ಮೋಹಿಸುತ
ಪರಮವೈಷ್ಣವರ ಪಾವನವ ಪಾಲಿಸುತ
ಪರಿಪರಿಯ ತನ್ನ ಬಿರುದ ಪೊಗಳಿಸುತ
ಪುರಂದರವಿಠಲ ವೆಂಕಟ ಬಂದ ಮನೆಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments