ಕಡುಕೃಪೆಯಿಂದಲಿ ಹರಿ ಒಲಿದವನಿಗೆ
(ರಾಗ ಶಂಕರಾಭರಣ ಆದಿತಾಲ)
ಕಡುಕೃಪೆಯಿಂದಲಿ ಹರಿ ಒಲಿದವನಿಗೆ
ನಡೆನುಡಿ ಸತ್ಯವೆ ಸಾಕ್ಷಿ
ದೃಢಭಕ್ತಿಯಿಂದಲಿ ಉಣಲಿಕ್ಕಿದವರಿಗೆ
ಷಡುರಸಾನ್ನವೆ ಸಾಕ್ಷಿ ||
ಮಡದಿ ಮಕ್ಕಳಿಗೆ ಒಡವೆಯನೀಯದಗೆ
ಕಡುದಾರಿದ್ರ್ಯವೆ ಸಾಕ್ಷಿ
ಪಡೆದೊಡವೆಯ ಧರ್ಮಕೆ ಈಯದವ ಬಾಯಿ
ಬಿಡುವುದೆ ಪರರಿಗೆ ಸಾಕ್ಷಿ ||
ಅನ್ನದಾನವ ಮಾಡಿದ ಮನುಜ ದಿ-
ವ್ಯಾನ್ನ ಉಂಬುವದೆ ಸಾಕ್ಷಿ
ಅನ್ನದಾನವನು ಮಾಡದವನು ಕಡು
ದೈನ್ಯ ಪಡುವುದೆ ಸಾಕ್ಷಿ ||
ಕನ್ಯಾದಾನವ ಮಾಡಿದವಗೆ ದಿವ್ಯ
ಹೆಣ್ಣಿನ ಭೋಗವೆ ಸಾಕ್ಷಿ
ಕನ್ಯಾದಾನವ ಮಾಡದವನು ಹೆಣ್ಣು
ಹೆಣ್ಣೆಂದು ಒರಲುವುದೆ ಸಾಕ್ಷಿ ||
ವಸ್ತ್ರದಾನವ ಮಾಡಿದವನು ದಿವ್ಯ
ವಸ್ತ್ರವ ಹೊದೆವುದೆ ಸಾಕ್ಷಿ
ವಸ್ತ್ರದಾನವ ಮಾಡದವಗೆ ನಿರ-
ವಸ್ತ್ರನಾಗಿಹುದೆ ಸಾಕ್ಷಿ ||
ಕಂಡ ಪುರುಷನಿಗೆ ಕಣ್ಣನಿಡುವಳಿಗೆ
ಗಂಡನ ಕಳೆವುದೆ ಸಾಕ್ಷಿ
ಪುಂಡತನದಿ ಪರಸ್ತ್ರೀಯರಳುಪಿದವ
ಹೆಂಡರ ಕಳೆವುದೆ ಸಾಕ್ಷಿ ||
ಪರರಿಗೆ ಒಂದು ತಾನೊಂದುಂಬುವಗೆ
ಜ್ವರಗುಲ್ಮರೋಗವೆ ಸಾಕ್ಷಿ
ಪರಿಪರಿಯಲಿ ಹಿರಿಯರ ದೂಷಿಸುವ
ತಿರಿದುಂಬುವುದೆ ಸಾಕ್ಷಿ ||
ಕ್ಷೇತ್ರದಾನವ ಮಾಡಿದ ಮನುಜಗೆ ಏಕ
ಛತ್ರಾಧಿಪತ್ಯವೆ ಸಾಕ್ಷಿ
ಪಾತ್ರಾಪಾತ್ರವರಿತು ದಾನವ ಮಾಡಿದಗೆ ಸು-
ಪುತ್ರರ ಪಡೆವುದೆ ಸಾಕ್ಷಿ ||
ಭಕ್ತಿಯನರಿಯದ ಅಧಮನಿಗೊಂದು
ಕತ್ತಲೆ ಮನೆಯೆ ಸಾಕ್ಷಿ
ಮುಕ್ತಿಯ ಪಡೆವರು ಪುರಂದರವಿಠಲನ
ಭಕ್ತರಾಗಿರುವುದೆ ಸಾಕ್ಷಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments