ಒಂದೇ ಮನದಿ ಭಜಿಸು ವಾಗ್ದೇವಿಯ

ಒಂದೇ ಮನದಿ ಭಜಿಸು ವಾಗ್ದೇವಿಯ

( ರಾಗ ಯದುಕುಲಕಾಂಭೋಜ ಝಂಪೆತಾಳ) ಒಂದೇ ಮನದಿ ಭಜಿಸು ವಾಗ್ದೇವಿಯ ||ಪ || ಇಂದುಮತಿ ಕೊಡುವಳು ಹರಿಯ ಧ್ಯಾನದಲಿ ||ಅ || ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ ನಿಂದು ಆರಾಧಿಸಲು ಹರಿ ವಿಶ್ವ(ಮಯ)ನೆಂದು ಬಂದ ವಿಘ್ನವ ಕಳೆದು ಭಾವ ಶುದ್ಧಿಯನಿತ್ತು ಪೊಂದಿಸಿದಳಾಗ ಶ್ರೀ ಹರಿಯ ಚರಣದಲಿ || ಅಂದು ದಶಮುಖನನುಜ ವಂದಿಸದೆ ವಾಣಿಯನು ನಿಂದು ತಪವನು ಗೆಯ್ಯೆ ಬಹುಕಾಲವು ಅಂದದಿಂದಜ ಮೆಚ್ಚಿ ವರವಧಿಕ ಬೇಡೆನಲು ನಿಂದು ಜಿಹ್ವೆಯಲಿ ನಿದ್ರೆಯ ಬೇಡಿಸಿದಳು || ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ ಉರುತರವಾದ ವಾಕ್ಶುದ್ಧಿಯನಿತ್ತು ತ್ವರಿತದಿ ಪುರಂದರವಿಠಲನ ಸೇವೆಯೊಳಿರಿಸಿ ಪರತತ್ವವಾದ ಕಥಾಮೃತವ ನುಡಿಸುವಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು