ರಾಮ ರಾಮ ರಾಮ ಸೀತಾರಾಮ ಎನ್ನಿರೋ

ರಾಮ ರಾಮ ರಾಮ ಸೀತಾರಾಮ ಎನ್ನಿರೋ

( ರಾಗ ಜಂಜೂಟಿ ರೂಪಕತಾಳ) ರಾಮ ರಾಮ ರಾಮ ಸೀತಾರಾಮ ಎನ್ನಿರೋ ||ಪ|| (ನೇಮದಿಂದ ಭಜಿಸುವವರ ಕಾಮಿತಗಳ ಕೊಡುವ ನಾಮ ) ಅಮರಪತಿಯ ದಿವ್ಯ ನಾಮ ಅಂದು ಒದಗದೊ ||ಅ|| ಭರದಿ ಯಮನ ಭಟರು ಬಂದು ಹೊರಡುಯೆಂದು ಮೆಟ್ಟಿ ತುಳಿದು ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಒದಗದೊ(/ಬಾರದಯ್ಯಾ)|| ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕುವಾಗ ಸಿಂಧುಸುತೆಯ ಪತಿಯ ನಾಮ ಅಂದಿಗೊದಗಿಬಾರದೊ (/ಅಂದಿಗೊದಗಲರಿಯದಯ್ಯ)|| ಶ್ವಾಸಖಾಸವೆರಡು ಕಂಠ ದೇಶದಲ್ಲಿ ಸೇರಿದಾಗ (/ವಾಸವಾಗಿ ಸಿಲುಕಿದಾಗ) ವಾಸುದೇವನೆಂಬ ನಾಮ ಆ ಸಮಯಕ್ಕೊದಗದೊ|| ಶೃಂಗಾರದ ದೇಹವೆಲ್ಲ ಅಂಗ ಮುರಿದು ಬೀಳುವಾಗ ಕಂಗಳಿಗಾತ್ಮ ಸೇರಿದಾಗ ರಂಗನ ಧ್ಯಾನ ಒದಗದೊ || ವಾತ ಪಿತ್ತವೆರಡು ಕೂಡಿ ಶ್ಲೇಷ್ಮ ಬಂದು ಒದಗಿದಾಗ (/ಈ ತನುವನಾವರಿಸಿ) ಧಾತುಗುಂದಿದಾಗ ರಘು- ನಾಥನ ಧ್ಯಾನ ಒದಗದೊ || ಕಲ್ಲು ಮರನಾಗಿ ಜ್ಞಾನ ವಿಲ್ಲದಾಗ ಮರಣವೊದಗೆ ಫುಲ್ಲನಾಭ ಕೃಷ್ಣನೆಂಬ ಸೊಲ್ಲು ಬಾಯಿಗೊದಗದೊ || ಕೆಟ್ಟ ಜನ್ಮದಲ್ಲಿ ಹುಟ್ಟಿ ದುಷ್ಟಕರ್ಮ ಮಾಡಿ ದೇಹ ಬಿಟ್ಟು ಹೋಗುವಾಗ ಪುರಂದ್ರ ವಿಠಲನ ಧ್ಯಾನ ಒದಗದೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು