ವಿಜಯದಾಸರು
ವಿಜಯದಾಸರು
ಕರ್ನಾಟಕ ಸಂಗೀತದ ಇತಿಹಾಸದಲ್ಲಿ ದಾಸಯುಗದ ಅಮೂಲ್ಯ ಕೊಡುಗೆಗಳಿಂದ, 15 ಮತ್ತು 16ನೇ ಶತಮಾನಗಳು “ಸುವರ್ಣ ಯುಗ”ಗಳಾಗಿ ಪರಿಣಮಿಸಿದವು. ಈ ಶತಮಾನದಲ್ಲಿ ಹರಿದಾಸ ಪಂಥದ ಶ್ರೀ ಪುರಂದರದಾಸರು, ಶ್ರೀ ಕನಕದಾಸರು ಮುಂತಾದ ದಾಸವರೇಣ್ಯರಿಂದ ಹರಿದಾಸ ಸಾಹಿತ್ಯ ಶ್ರೀಮಂತವಾಗಿ ಬೆಳೆಯಿತು. ಹರಿದಾಸ ಕೂಟದಲ್ಲಿ 18ನೇ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು ಎಂದರೆ ವಿಜಯವಿಠಲರು. ಇವರು ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೇಕಲಪರಿ ಎಂಬ ಗ್ರಾಮದವರು. ಶ್ರೀನಿವಾಸಪ್ಪ ಮತ್ತು ಕೂಸಮ್ಮ ಎಂಬ ಬಡ ಬ್ರಾಹ್ಮಣ ದಂಪತಿಗಳ ಹಿರಿಯ ಮಗನಾಗಿ 1683ರಲ್ಲಿ ಜನಿಸಿದರು. ಇವರ ಮೊದಲಿನ ಹೆಸರು ದಾಸಪ್ಪ. ಬಡತನದ ಬೇಗೆಯಲ್ಲಿ ಬೆಂದ ಇವರನ್ನು 'ಕೂಸಿ ಮಗ ದಾಸ' ಎಂದು ಹಗುರವಾಗಿ ಹೀಯಾಳಿಸಿ ಜನ ಕರೆಯುತ್ತಿದ್ದರು. ಈ ಅವಮಾನ ಮತ್ತು ಬಡತನದ ಬೇಗೆ ಸಹಿಸಲಾರದೇ ಚಿಕ್ಕ ವಯಸ್ಸಿನಲ್ಲಿಯೇ ದೇಶಾಂತರ ಹೊರಟು ಕಾಶಿ ಕ್ಷೇತ್ರಕ್ಕೆ ಬಂದರು. ಅಲ್ಲಿ ಹಲವಾರು ಸಾಧು ಸಂತರ ಸತ್ಸಹವಾಸ ಮಾಡಿ, ಪವಿತ್ರ ಗಂಗಾಸ್ನಾನ ಮಾಡುತ್ತಾ ವಿರಾಗಿಯಾಗಿ ಜೀವನ ಸಾಗಿಸುತ್ತಿದ್ದರು. ನಾಲ್ಕು ವರುಷಗಳ ನಂತರ ಸ್ವಂತ ಊರಿಗೆ ಮರಳಿದರು. ಅಲ್ಲಿ ಅವರಿಗೆ ಅರಳಮ್ಮ ಎಂಬುವರೊಡನೆ ವಿವಾಹವಾಯಿತು. ಅಲ್ಲಿ 16 ವರ್ಷಗಳ ಕಾಲ ಸಾಂಸಾರಿಕ ಬದುಕು ನಡೆಸಿದರು. ನಂತರ ತಮ್ಮ 32ನೇ ವಯಸ್ಸಿನಲ್ಲಿ ಈ ಜೀವನದ ಜಂಜಾಟಗಳನ್ನು ಸಹಿಸಲಾರದೇ ಮತ್ತೆ ಕಾಶಿ ಕ್ಷೇತ್ರಕ್ಕೆ ಹಿಂದಿರುಗಿದರು. ಗಯಾದಲ್ಲಿ ಹೆತ್ತವರ ಶ್ರಾದ್ಧ ಮಾಡಿ ಪಿತೃ ಋಣ ತೀರಿಸಿ ಸಾಧು ಸಂತರೊಂದಿಗೆ ಓಡಾಡುತ್ತಾ ನಿಷ್ಠೆಯಿಂದ ತಪಸ್ಸನ್ನಾಚರಿಸಿದರು. ಒಮ್ಮೆ ಇವರಿಗೆ ಸ್ವಪ್ನದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು ದರ್ಶನ ನೀಡಿ, ಶ್ರೀ ವೇದವ್ಯಾಸರ ದರ್ಶನ ಮಾಡಿಸಿ “ವಿಜಯ” ಎಂಬ ಬೀಜಾಕ್ಷರವನ್ನು ಬರೆದು ಅನುಗ್ರಹಿಸಿದಂತಾಯಿತು. ಸ್ವಪ್ನಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದ ಆಕ್ಷಣವೇ ಇವರಲ್ಲಿ ಜ್ಞಾನ ಪ್ರಕಾಶವಾಯಿತು. ಗುರುಗಳ ಅನುಗ್ರಹದಿಂದ “ವಿಜಾಯದಾಸ”ರಾದ ಅವರು ಆಡಿದ ಪ್ರತಿ ಮಾತು ಹಾಡಾಗಿ ಹರಿಯಿತು. ಆಗ ಅವರ ರಚನೆಯೊಂದು ಹೀಗಿದೆ,
ಅಂತರಂಗದ ಕದವು ತೆರೆಯಿತಿಂದು
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೋ ಎನಗೆ|| |ಅಂತರಂಗದ|
ಸ್ವಮೂರ್ತಿಗಳ ಮಧ್ಯೆ ಸಚ್ಚಿದಾನಂದೈಕ ರವಿಧರೆಯರಿಂದಲಾಗಿಂಗಿತ್ವತಿ
ಕಮಲಾ ಜಾಜಿಗಳಿಂದ ಸ್ತುತಿಸಿಕೊಳ್ಳುತ ಹೃದಯ
ಕಮಲದ ಒಳಗಿರುವ ವಿಜಯವಿಠಲನ ಕಂಡೆ|| |ಅಂತರಂಗದ||
ಹೀಗೆ ಪುರಂದರ ದಾಸರ ಅನುಗ್ರಹದಿಂದಲೇ ವಾಗ್ಗೇಯಕಾರ ಸಾಮರ್ಥ್ಯವನ್ನು ಪಡೆದು , ಪುರಂದರ ದಾಸರನ್ನೇ ತಮ್ಮ ಮಾನಸಿಕ ಗುರುವಾಗಿ ಸ್ವೀಕರಿಸಿದವರು ಶ್ರೀ ವಿಜಯದಾಸರು. ಇವರ ಅಮೂಲ್ಯವಾದ ರಚನೆಗಳಿಂದಲೇ ಪುರಂದರ ದಾಸರ ಜೀವನವನ್ನು ಚಿತ್ರಿಸಲು ಸಾಧ್ಯವಾಯಿತು. ಇವರು ವಿಜಯ ವಿಠಲ ಎಂಬ ಅಂಕಿತದೊಡನೆ 25,000 ಕೃತಿಗಳನ್ನು ರಚಿಸಿ ಪುರಂದರರ 4,75,000 ರಚನೆಗಳನ್ನು 5,00,000ಕ್ಕೆ ಪೂರ್ಣಮಾಡಿದರೆಂದು ಪ್ರತೀತಿ ಇದೆ. ಇವರದ್ದು ಸುಮಾರು 1200 ರಚನೆಗಳ ಮಾತ್ರ ದೊರಕಿವೆ. ಅವುಗಳಲ್ಲಿ ಉಗಾಭೋಗಗಳು 70 ಆದರೆ ಸುಳಾದಿಗಳ ಸಂಖ್ಯೆ 580. ಹೀಗಾಗಿ ಇವರನ್ನು ಸುಳಾದಿ ವಿಜಯದಾಸರು ಎಂದು ಜನ ಗುರುತಿಸುತ್ತಿದ್ದರು. ಕಂಕಣಾಕಾರ ಸುಳಾದಿ, ಹಬ್ಬದ ಸುಳಾದಿ, ಹರಿದಾಸ ಲಕ್ಷಣ ಸುಳಾದಿ, ಶ್ರೀ ಕೃಷ್ಣ ಮಹಿಮೆಗಳನ್ನು ತಿಳಿಸುವ ಸುಳಾದಿ ಮುಂತಾದ ವಿಷಯಾಧಾರಿತ ಸುಳಾದಿಗಳನ್ನು ಹಾಡಿದ್ದಾರೆ. ವೇದ ಉಪನಿಷತ್ತಿನ ಸಾರವನ್ನೆಲ್ಲ ತಮ್ಮ ರಚನೆಗಳಲ್ಲಿ ಇಳಿಸಿದ್ದಾರೆ.
ಶ್ರೀ ಕೃಷ್ಣ ಪರಮಾತ್ಮನೆಂದರೆ ಅಪಾರ ಭಕ್ತಿ. ಅವನನ್ನು ಮುಟ್ಟಿ ಭಜಿಸುವ ಸೌಭಾಗ್ಯಕ್ಕಾಗಿ ಕೃಷ್ಣನನ್ನು ಹಾಡಿ ಕೊಂಡಾಡಿದರು.
ಕೃಷ್ಣಾ... ಕೃಷ್ಣಾ….
ಭಕ್ತಜನಪಾಲಕ
ಭಕ್ತಿ ಸುಖದಾಯಕ
ಮುಕ್ತೀಶ ದೀನಬಂಧು|| ||ಕೃಷ್ಣ||
ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ|
ಸತ್ಯವತಿ ಸುತನೇ ಕಾಯೋ ಕೃಷ್ಣಾ ಕೃಷ್ಣಾ||ಭಕ್ತ||
ಆನಂದ ತೀರ್ಥಮುನಿಯ ದ್ಯಾನಿಪರ ಸಂಘ
ಆನಂದದಲಿ ನಿಲ್ಲಿಸೋ ಕೃಷ್ಣಾ ಕೃಷ್ಣಾ
ದೀನ ಗಣ ಮಂದಾರ ನೀನೆಂದು ನಂಬಿದೆನೋ
ಸಾನುರಾಗದಿ ಕಾಯೋ ಕೃಷ್ಣಾ ಕೃಷ್ಣಾ|| ಭಕ್ತ||
ಕೆಟ್ಟ ಜನರ ಸಂಘ ಇಷ್ಟು ದಿನವು ಮಾಡಿ
ನಷ್ಟವಾಗಿ ಪೋದೆನೋ ಕೃಷ್ಣಾ ಕೃಷ್ಣಾ
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ
ಇಷ್ಟಗಳ ಎನಗೆ ಕೊಡಿಸೋ ಕೃಷ್ಣಾ ಕೃಷ್ಣಾ||ಭಕ್ತ||
ವಿಜಯದಾಸರು ಪವಾಡ ಪುರುಷರಾಗಿ ಮೆರೆದ ದಂತಕಥೆಗಳು ಅನೇಕ ಇವೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ನೋಡೋಣ
ಒಮ್ಮೆ ತಿರುಪತಿ ತಿರುಮಲೆಯಲ್ಲಿ ರಥೋತ್ಸವ. ಜನಜಂಗುಳಿಯೆಲ್ಲ ರಥದ ಮುಂದೆ ಕಿಕ್ಕಿರಿದಿದೆ. ಪೂಜೆ ಪುನಸ್ಕಾರಗಳಲ್ಲಾ ನಡೆಯುತ್ತಿದೆ. ಗೋವಿಂದ ನಾಮಸ್ಮರಣೆ ಎಲ್ಲೆಲ್ಲೂ ಕೇಳಿ ಬರುತ್ತಿದೆ. ನಂತರ ಭಕ್ತರೆಲ್ಲಾ ಸೇರಿ ರಥವನ್ನೆಳೆಯಲು ಪ್ರಾರಂಭಿಸಿದರು. ಆದರೆ ರಥದ ಚಕ್ರ ಒಂದರ್ಧ ಇಂಚಿನಷ್ಟೂ ಅಳ್ಳಾಡಲಿಲ್ಲ. ಜನಗಳಿಗೆ ಆಶ್ಚರ್ಯ. ತುಂಬಿದ ಜನರೆಲ್ಲಾ ರಥಕ್ಕೆ ಕಟ್ಟಿದ ಹಗ್ಗವನ್ನು ತಮ್ಮ ಶಕ್ತಿ ಮೀರಿ ಎಳೆಯುತ್ತಿದ್ದಾರೆ . ಕೊನೆಗೆ ಆನೆಗಳ ಕೈಯಲ್ಲಿ ಎಳೆಸಿದರೂ ರಥ ಜರುಗಲಿಲ್ಲ. ಆಗ ಯಾರೋ, “ಅಯ್ಯೋ ವಿಜಯದಾಸರು ಇಲ್ಲಿಲ್ಲ. ಅದಕ್ಕೆ ರಥ ಮುಂದೆ ಚಲಿಸುತ್ತಿಲ್ಲ.” ಎಂದು ಕೂಗಿದರು. ಆಗ ವಿಜಯದಾಸರನ್ನು ಹುಡುಕಿ ಕರೆತರಲು ಕೆಲವರು ಹೋದರಂತೆ. ಅವರನ್ನು ಅಲ್ಲಿ ಇಲ್ಲಿ ಹುಡುಕಿ ಅಂತೂ ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿ ಕಂಡರು. ದೇವರ ಮುಂದೆ ಕುಳಿತು ಗೋವಿಂದನ ನಾಮಸ್ಮರಣೆಯಲ್ಲಿ ತಲ್ಲೀನರಾಗಿ ಹೋಗಿದ್ದರು ವಿಜಯದಾಸರು. ಅಲ್ಲಿ ಬಂದ ಜನ ಮೂಕವಿಸ್ಮಿತರಾಗಿ ಅಲ್ಲೇ ನಿಂತರು. ನಂತರ ಅವರನ್ನು ರಥ ಚಲಿಸುವಂತೆ ಮಾಡಬೇಕೆಂದು ಕೇಳಿಕೊಂಡರು. ಆಗ ಅವರು ರಥದ ಬಳಿ ಬಂದು “ಸಾಗಿಬಾರಯ್ಯಾ ಭವರೋಗ ವೈದ್ಯ” ಎಂದು ಕೂಗಿ ಕರೆದರಂತೆ. ಆಗ ರಚಿಸಿದ ಅವರ ರಚನೆ ಒಂದು ಹೀಗೆ ಇದೆ.
ಬಾಬಾ ಭಕುತರ ಹೃದಯ ಮಂದಿರ
ಬಾಬಾ ಜಗದೋದ್ಧಾರ
ಬಾಬಾ ವೆಂಕಟಾಚಲವಿಹಾರ
ಬಾಬಾ ಅನೇಕಾವತಾರ ನೀ ರಘುರಾ||ಬಾಬಾ||
ಧಕ್ಷ ಕಮಲಾಕ್ಷ ರಾಕ್ಷಸಕುಲಚಿತ್ತ
ಲಕ್ಷ್ಮಣಾಗ್ರಜ ಲಕ್ಷ್ಮಿ ವಾಸ್ನಾ
ಪಕ್ಷಿ ವಾಹನಾ ಪೂರ್ಣ ಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವಪರ ಅಕ್ಷಯವಂತ
ಶುಕ್ಲಾಂಬರಧರ ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೆರ ತಕ್ಷಣದಲಿ ತಂದ
ಅಕ್ಕರ ಪುರುಷ ಗೋವಿಂದ||ಬಾಬಾ||
ಬಂಗಾರ ರಥದೊಳು ಶೃಂಗಾರ ಪಾದ ಶ್ರೀ
ಮಂಗಳಾಂಗ ಕಾಳಿಂಗ ರಂಗ ನರಸಿಂಗ
ಅಂಗಾ ಸಜ್ಜನಕ ಸಾರಂಗ ರಥಾಂಗಪಾಣಿ
ಸಂಗನಿಸಂಗಮ ತಂದ ವಿಹಂಗ
ಪ್ರಬಂಧ ನಾಯಕ ಪರಿಪಾಲ,
ಸಂಗೀತ ಲೋಲ, ಗೋಪಾಂಗನೆಯರ
ಅಂತರಂಗ ಸಂತಾಪವಿದೂರ||ಬಾಬಾ||
ಭಕ್ತಾವತಾರದ ದೊರೆಯೇ ಹರಿಯೇ
ಧನ ಸಿರಿಯೇ ನಾನು ಮತ್ತೊಬ್ಬರನು ಹೀಗೆ ಕಾಣೆ
ನೃತ್ತರ ಸಂಗಡ ಓಡಾಡುವ ದೊರೆಯೇ
ಬೆನ್ನ ಹತ್ತಿ ಆಡುವ ಮರಿಯೇ
ಚಿತ್ತದೊಲ್ಲಭನಮ್ಮ ವಿಜಯ ವಿಠಲರೇ
ಯತ್ನ ನೋಡಲು ನಿನಗೆ ಸರಿಯೇ
ಅತ್ತಿತ್ತ ಹೋಗದೇ ಇತ್ತ ಬಾರಯ್ಯಾ
ಬೆನ್ಹತ್ತಿ ವೆಂಕಟ ದೊರೆಯೇ||ಬಾಬಾ||
ವಿಜಯದಾಸರು ಬೇಡಿದ ಮೇಲೆ ಇನ್ನು ರಥ ನಿಲ್ಲುವುದುಂಟೇ! ಕೂಡಿದ್ದ ಜನರ ಹರ್ಷೋದ್ಗಾರದೊಂದಿಗೆ ರಥ ಚಲಿಸಿಯೇ ಬಿಟ್ಟಿತು. ಹೀಗೆ ಅವರ ಅನೇಕ ಪವಾಡಗಳ ಬಗ್ಗೆ ಕಥೆಗಳು ಇವೆ. ಅವರ ಶಿಷ್ಯರಾದ ಶ್ರೀ ಮೋಹನದಾಸರಿಗೆ ಜೀವದಾನ ಮಾಡಿದ್ದು, ನೀರಡಿಕೆಯಿಂದ ಬಳಲುತ್ತಿದ್ದ ಕತ್ತೆಗೆ ತಮ್ಮ ಸ್ನಾನಕ್ಕೆಂದು ಇಟ್ಟುಕೊಂಡಿದ್ದ ನೀರನ್ನು ಕುಡಿಸಿ ನಂತರ ಚಿಲುಮೆಯಲ್ಲಿ ನೀರು ಬರುವಂತೆ ಮಾಡಿ ಆಹ್ನಿಕಗಳನ್ನು ಪೂರೈಸಿದುದು, ತನ್ನ ಪರಮಾಪ್ತ ಗೆಳೆಯರಾದ ಕೇಶವರಾಯರ ಮಗನನ್ನು ಬದುಕಿಸಿ ಅವರನ್ನು ಪುತ್ರ ಶೋಕದಿಂದ ಪಾರು ಮಾಡಿದುದು, ಹೀಗೆ ಹತ್ತು ಹಲವಾರು.
ಸಮಾಜದಿಂದ ಬಹಿಷ್ಕೃತಳಾದ ಶ್ರೀಮಂತ ಮಹಿಳೆಯ ಆತಿಥ್ಯ ಸ್ವೀಕರಿಸಿ, ಆಕೆಯ ಶವ ಸಂಸ್ಕಾರಗಳನ್ನು ತಾನೇ ನಿಂತು ಮಾಡಿದರು. ಇಂತಹಾ ಅನೇಕ ಬಗೆಗಳ ಜನಸೇವೆಯನ್ನೂ ಮಾಡಿದ್ದಾರೆ.
ಒಟ್ಟಿನಲ್ಲಿ ಹರಿದಾಸ ಸಾಹಿತ್ಯ ಚರಿತ್ರೆಯಲ್ಲಿ ಶ್ರೀ ವಿಜಯದಾಸರ ಕಾಲ ವಿಶೇಷ ಮಹತ್ವವನ್ನು ಪಡೆದಿದೆ. ಇವರು ತಮ್ಮ ಶಾಸ್ತ್ರ ಗರ್ಭಿತವಾದ ಸುಳಾದಿಗಳಲ್ಲಿ ಸ್ವಧರ್ಮ ನಿಷ್ಠೆಯನ್ನು ತೋರಿಸಿದ್ದಾರೆ. ಇವರ ರಚನೆಗಳಲ್ಲಿ ಮಾನವನ ನಿತ್ಯ ಜೀವನದ ಬಗ್ಗೆ ವಿಶ್ಲೇಷಣೆ ಇದೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಾದಿಗಳ ವಸ್ತು ವಿಷಯಗಳ ಬಗ್ಗೆ ಉಲ್ಲೇಖಗಳಿವೆ. ಭಗವಂತನ ಲೀಲಾ ವಿನೋದಗಳ ಬಗ್ಗೆ ವೈವಿಧ್ಯಮಯ ಚಿತ್ರಣಗಳಿವೆ. ಇವರ ಇಬ್ಬರು ಪ್ರಮುಖ ಶಿಷ್ಯರು ಎಂದರೆ ದಾಸಪರಂಪರೆಯನ್ನು ಬೆಳೆಸಿದ ಮೋಹನದಾಸರು ಹಾಗೂ ಗೋಪಾಲದಾಸರು. ಇವರು 1755ರಲ್ಲಿ ದೇಹತ್ಯಾಗ ಮಾಡಿದರು.
Forums
- Log in to post comments