ಕನಕದಾಸರ ಮುಂಡಿಗೆಗಳು
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲು ವಚನ ಸಾಹಿತ್ಯ, ನಂತರ ಹರಿದಾಸ ಸಾಹಿತ್ಯ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದವು. ಭಕ್ತಿ, ಜ್ಞಾನ ವೈರಾಗ್ಯಗಳನ್ನು ಜನರಲ್ಲಿ ಬಿತ್ತುತ್ತಾ ಸಮಾಜದ ಓರೆಕೋರೆಗಳನ್ನು ಸರಿಪಡಿಸುತ್ತಾ, ತಮ್ಮನ್ನೂ ಆತ್ಮ ವಿಮರ್ಶೆಗೆ ಗುರಿಪಡಿಸಿಕೊಳ್ಳುತ್ತಾ ವಚನಕಾರರು ಹಾಗೂ ಹರಿದಾಸರೂ ಸಾಹಿತ್ಯ ನಿರ್ಮಾಣ ಮಾಡಿದರು.
ಬುದ್ಧಿಶಕ್ತಿಯ ಪ್ರದರ್ಶನ ಮನುಷ್ಯನ ಸಹಜ ಪ್ರವೃತ್ತಿಗಳಲ್ಲೊಂದು. ಹೆಚ್ಚು ಚುರುಕು ಬುದ್ಧಿಯವರೆಲ್ಲಾ ಈ ಬಗೆಯ ಅಭಿವ್ಯಕ್ತಿಗೆ ಹೊಸ ಹೊಸ ಮಾಧ್ಯಮಗಳನ್ನು ಕಂಡುಕೊಂಡರು. ಜನಪದ ಒಗಟುಗಳು ಇದಕ್ಕೆ ಉದಾಹರಣೆ. ಈ ದಿಕ್ಕಿನಲ್ಲಿ ಜನಪದದಿಂದ ಪ್ರೇರಿತರಾಗಿ ಶಿಷ್ಟ ಕವಿಗಳು ತಮ್ಮ ಕಾವ್ಯಗಳಲ್ಲಿ ಈ ಬಗೆಯ ವಿನ್ಯಾಸಗಳನ್ನು ಬಳಸಿದರು. ಇದೇ ರೀತಿಯಲ್ಲಿ ಕನಕದಾಸರ ಮುಂಡಿಗೆಗಳು ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ. ದಾಸಸಾಹಿತ್ಯದಲ್ಲಿ ಕನಕದಾಸರಲ್ಲದೇ ಪುರಂದರದಾಸರು, ಭಾಗಣ್ಣದಾಸರು ಮುಂತಾದವರೂ ಮುಂಡಿಗೆಗಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕನಕದಾಸರ ಮುಂಡಿಗೆಗಳಿಗೆ ವಿಶಿಷ್ಟ ಸ್ಥಾನವಿದೆ.
ಮುಂಡಿಗೆಗಳು ಎಂದರೇನು? ವಿವಿಧ ವಿದ್ವಾಂಸರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
“ಮುಂಡಿಗೆ ಎಂಬ ಶಬ್ದಕ್ಕೆ ಅರ್ಥ ತೊಲೆ ಅಥವಾ ಮರದ ದಿಮ್ಮಿ ಎಂಬುದಾಗಿದೆ. ಸಾಹಸ ಪ್ರದರ್ಶನಕ್ಕೆ ಸವಾಲು ರೂಪದಲ್ಲಿ ಇದನ್ನು ಎತ್ತಿ ಎಸೆಯುವ ಪದ್ಧತಿ ಇತ್ತೆಂದು ತೋರುತ್ತದೆ. ಹೀಗಾಗಿ ಕನಕರ ಈರೀತಿಯ ರಚನೆಗಳಿಗೆ ಮುಂಡಿಗೆಗಳು ಎಂದು ಹೆಸರಿಸಿರಬೇಕು.” ಎನ್ನುತ್ತಾರೆ ಪ್ರೊ. ಶ್ರೀ ಸುಧಾಕರ್ ಅವರು.
ಶ್ರೀ ಬಿಂದು ಮಾಧವ ಬುರ್ಲಿಯವರು, “ಕಟ್ಟಿಗೆಯ ದೊಡ್ಡ ತೊಲೆಯು ಎತ್ತಲು ಹೇಗೆ ಸುಲಭಸಾಧ್ಯವಲ್ಲವೋ ಹಾಗೆಯೇ ಕನಕರ ಈರೀತಿಯ ಹಾಡುಗಳನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿಲ್ಲವೆಂದೇ ಇವುಗಳಿಗೆ ಮುಂಡಿಗೆಗಳು ಎಂದು ಕರೆದಿರುವರು” ಎಂದಿದ್ದಾರೆ.
ಹೀಗೆ ಹಲವು ವಿದ್ವಾಂಸರು ಹಲವಾರು ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಕನಕದಾಸರು ಗೂಢಾರ್ಥದ ಮುಂಡಿಗೆಗಳನ್ನು ರಚಿಸಲು ಏನು ಕಾರಣ ಎಂದು ಯೋಚಸಿದಾಗ ಶ್ರೀ ಬುರ್ಲಿಯವರು ಕೆಲವು ಉತ್ತರಗಳನ್ನು ನೀಡಿದ್ದಾರೆ.
1. ಕೆಲವು ಪಾಂಡಿತ್ಯ ಪ್ರದರ್ಶನಕ್ಕಾಗಿ ಇರಬೇಕು.
2. ಇನ್ನು ಕೆಲವು ಪಾಂಡಿತ್ಯ ಪರೀಕ್ಷೆಗಾಗಿ ಇದ್ದಂತೆ ಕಾಣುತ್ತದೆ.
3. ಮತ್ತೆ ಕೆಲವು ಬುದ್ಧಿಪೂರ್ವಕವಾಗಿ ಗುಹ್ಯ ಭಾಷೆಯಲ್ಲಿ ಹೇಳಿರಬಹುದು.
4. ಕೆಲವೊಮ್ಮೆ ಜ್ಞಾನಿ ಜ್ಞಾನಿಗಳ ಆಂತರಿಕ ಭಾಷೆಯಾಗಿ ಹೊರಹೊಮ್ಮಿರಬಹುದು.
5. ಆತ್ಮಾನುಭವ ಹಾಗೂ ತತ್ವಜ್ಞಾನವನ್ನು ವಿವರಿಸಿರಬಹುದು.
6. ಪಂಡಿತರನ್ನೂ ಪೌರಾಣಿಕರನ್ನೂ ಕೆಣಕಿದ ಕೆಲವು ಹಾಡುಗಳನ್ನೂ ಕಾಣಬಹುದು.
ಡಾ. ಸಿದ್ದಣ್ಣ ಜಕಬಾಳರು, “ವ್ಯಾಸರಾಯರ ಶಿಷ್ಯ ವರ್ಗದವರಲ್ಲಿ ಕೆಲ ಒಣಪಾಂಡಿತ್ಯದಿಂದ ಕೂಡಿದ ಅಹಂಕಾರದಿಂದ ಮೆರೆಯುವ ವ್ಯಕ್ತಿಗಳು ಕನಕದಾಸರನ್ನು ನಿಂದಿಸಿರಬೇಕು. ಅವರನ್ನು ಸರಿ ಮಾರ್ಗಕ್ಕೆ ತರಲು ಕನಕದಾಸರು ಇಂತಹ ಮುಂಡಿಗೆಗಳನ್ನು ರಚಿಸಿರಬೇಕು.” ಎನ್ನುತ್ತಾರೆ.
ಸ್ವತಃ ಕನಕದಾಸರೇ,
“ವೇದವಾದಗಳಲ್ಲಿ| ಕಾದುವ ಜನರಲ್ಲಿ|
ಓದು ವಿದ್ಯೆಗಳಲ್ಲಿ| ವಾದವ ಗೆಲಿಸಯ್ಯ|
ಎಂದು ಹಾಡಿದ್ದಾರೆ.
ಪ್ರೊ. ಸುಧಾಕರ್ ಅವರು ಕನಕದಾಸರ ಮುಂಡಿಗೆಗಳನ್ನು ಎರಡುವಿಧವಾಗಿ ವಿಂಗಡಿಸಿದ್ದಾರೆ.
1. ಪೌರಾಣಿಕ ವಾವೆ ವರಸೆಯ ಮುಂಡಿಗೆಗಳು,
2. ಅನುಭಾವದ ನಿಗೂಢ ಮುಂಡಿಗೆಗಳು.
ಮೊದಲನೆಯದರಲ್ಲಿ ವಿಷ್ಣುವಿನ ದಶಾವತಾರಗಳು, ಅವನ ವಿವಿಧ ಲೀಲೆಗಳು ಅವನ ಮೇಲಿನ ಮುಕ್ತ ಸ್ತುತಿ ಮುಂತಾದವು ಪ್ರಮುಖವಾಗಿ ವ್ಯಕ್ತಗೊಂಡ ಭಾವಗಳಾಗಿವೆ.
ಅನುಭಾವ ನಿಗೂಢ ಮುಂಡಿಗೆಗಳು ವೈವಿದ್ಯಮಯವಾಗಿವೆ. ಮೇಲ್ನೋಟದ ಓದಿನಲ್ಲಿ ಸಾಮಾನ್ಯ ವಿಷಯಗಳ ವಿಚಾರವೆನ್ನಿಸಿದರೂ ಸೂಕ್ಷ್ಮ ಅವಲೋಕನದಿಂದ ನಿಗೂಢ ಅರ್ಥಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಉದಾಹರಣೆಗೆ “ಪರಮಪುರುಷ ನೀನೆಲ್ಲಿಕಾಯಿ” ಎಂಬ ಮುಂಡಿಗೆಯಲ್ಲಿ ಹಲವಾರು ತರಕಾರಿಗಳನ್ನು ಬಳಸಿಕೊಂಡು ಬೆಡಗನ್ನು ಸೃಷ್ಟಿಸಿದ್ದಾರೆ.
ಪರಮಪುರುಷ ನೀನೆಲ್ಲಿಕಾಯಿ
ಸರಸಿಯೊಳಗೆ ಕರಿಕೂಗಲುಕಾಯಿ
ಹಿರಿದು ಮಾಡಿದ ಪಾಪ ನುಗ್ಗೇಕಾಯಿ
ಹರಿ ನಿನ್ನ ಧ್ಯಾನ ಬಾಳೇಕಾಯಿ
ಸರುವ ಜೀವರ್ಗುಣಿಸಿಯುಂ ಬದನೆಕಾಯಿ
ಅರಿಷಡ್ವರ್ಗಗಳೊದಗಿಲಿಕಾಯಿ
ತಾತ್ಪರ್ಯ:- ಪರಮಪುರುಷನೇ ನೀನೆಲ್ಲಿದ್ದೀಯ? ನನ್ನನ್ನು ರಕ್ಷಿಸು (ನೀನೆಲ್ಲಿ ಕಾಯಿ)
ಸರೋವರದಲ್ಲಿ ಗಜೇಂದ್ರ ಮೊಸಳೆಯ ಬಾಯಿಗೆ ಸಿಕ್ಕಿ ಕೂಗಿಕೊಂಡಾಗ ಕಾಪಾಡು. (ಕರಿಕೂಗಲು ಕಾಯಿ)
ಅಪಾರವಾದ ಪಾಪ ಸಂಚಯವನ್ನೆಲ್ಲಾ ನುರಿದು ಪುಡಿಪುಡಿಯಾಗುವಂತೆ ಮಾಡು. (ನುಗ್ಗೆ ಕಾಯಿ)
ಹರಿ ನಿನ್ನ ಧ್ಯಾನವೇ ಉಸಿರಾಗಿ ಬಾಳುವಂತೆ ಮಾಡು. (ಬಾಳೇಕಾಯಿ)
ಎಲ್ಲ ಜೀವರಾಶಿಗಳನ್ನೂ ಉಣಿಸಿ ತಣಿಸಿ ಬೆಳೆಸುವ ನೀನು ಮಾತ್ರ ಉಣ್ಣದವನು. (ಜೀವರಿಗುಣಿಸಿಯುಂಬದನೆಕಾಯಿ) ಅರಿಷಡ್ವರ್ಗಗಳಿಲ್ಲದಂತೆ ರಕ್ಷಿಸು. (ಇಲಿಕಾಯಿ)
ಇನ್ನೊಂದು ಮುಂಡಿಗೆಯಲ್ಲಿ ಮೇಲುನೋಟಕ್ಕೆ ಬೀಸುವ ಕಲ್ಲಿನ ವರ್ಣನೆಯಾದರೆ ಗೂಢಾರ್ಥದಲ್ಲಿ ಪರಮಾತ್ಮನಿಗೆ ಹೋಲಿಸಲಾಗಿದೆ.
ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ,
ಇದರ ಕುರುಹು ಪೇಳಿ ಕುಳಿತಿರುವ ಜನರು,
ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ
ಗಂಟಲು ಮೂರು ಉಂಟು ಮೂಗಿಲ್ಲ
ಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು.
ತಾತ್ಪರ್ಯ:- ಬೀಸುವ ಕಲ್ಲನ್ನು ಹಿಡಿದು ಬೀಸುವ ಮರದ ಗೂಟವೇ ಒಂಟಿ ಕೊಂಬು. ಹೊಟ್ಟೆಯಲ್ಲಿ ಏನೂ ಇಲ್ಲ. ಖಾಲಿ ಶರೀರ. ಬೀಸುವ ಕಲ್ಲಿನ ಮೇಲ್ಭಾಗದ ಕಲ್ಲಿನಿಂದ ಧಾನ್ಯ ಇಳಿಯಲು ಮಾಡಿರುವ ಮೂರು ರಂದ್ರಗಳು. ಉಸಿರಾಟಕ್ಕೆ ಮೂಗು ಇಲ್ಲ. ಎಲ್ಲಿಯೂ ಚಲಿಸದೇ ಇರುವುದು. ಹತ್ತು ಹಲವಾರು ಧಾನ್ಯಗಳನ್ನು ಅದರ ಬಾಯಲ್ಲಿಟ್ಟಾಗ ತಿಂದು ಹಾಕುವುದು. ಇದು ಸಾಮಾನ್ಯವಾದ ಮೇಲುನೋಟದ ಅರ್ಥ.
ಪಾರಮಾರ್ಥಿಕ ಅರ್ಥದಲ್ಲಿ ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಎಂದರೆ ಮಾಯೆಯನ್ನು ನುಂಗುವ ಚೈತನ್ಯ ರೂಪಿ ಪರಮಾತ್ಮ ದೇಹವೆಂಬ ಮನೆಯೊಳಗೆ ಬಂದು ಕುಳಿತಿದ್ದಾನೆ. ಓಂ ಎಂಬಲ್ಲಿ ಓ ಅಕ್ಷರದ ಮೇಲೆ ದೀರ್ಘ ಸ್ವರದ ಕೊಂಬಿದೆ. ಸಾಂಸಾರಿಕ ವ್ಯಾಮೋಹದ ಕರುಳು ಒಡಲಿನಲ್ಲಿಲ್ಲ. ಓಂಕಾರದ ಅ ಉ ಮ ಮೂರಕ್ಷರಗಳೇ ಮೂರು ರಂದ್ರಗಳು. ವಿಷಯ ವಾಸನೆಯ ಗುಂಗಿಲ್ಲವೆಂಬುದೇ ಮೂಗಿಲ್ಲವೆಂಬುದರ ಅರ್ಥ. ಪಂಚಭೂತಗಳು, ಮನ, ಬುದ್ಧಿ, ಅಹಂಕಾರಗಳೂ ಸೇರಿ ಎಂಟು ಹಾಗೂ ಜ್ಞಾನೇಂದ್ರಿಯಗಳು ಹಾಗೂ ಕರ್ಮೇಂದ್ರಿಯಗಳೂ ಸೇರಿ ಹತ್ತು ಇವುಗಳ ಮೂಲಕ ಎಲ್ಲಾ ವಿಷಯಗಳನ್ನೂ ಅರಗಿಸಿಕೊಳ್ಳುವುದು ಅಂದರೆ ನಿರ್ಲಿಪ್ತತೆಯನ್ನು ತಂದುಕೊಳ್ಳುವುದು ಎಂದಾಗುತ್ತದೆ.
ಹೀಗೆಯೇ ‘ಕೆಂಪು ಮೂಗಿನ ಪಕ್ಷಿ’, ಲಟಪಟ ನಾ ಸೆಟೆಯಾಡುವನಲ್ಲ’, ಒಂಬತ್ತು ಹೂವಿಗೆ ಒಂದೇ ನಾಳವು’, ‘ಬಿತ್ತಾಕ ಹೋದಲ್ಲಿ ಬಿಡದೇ ಮಳೆ ಹೊಡೆದು’ ಮುಂತಾದ ಅಪೂರ್ವವಾದ ಅನೇಕ ಮುಂಡಿಗೆಗಳಿವೆ.
ಕನಕದಾಸರ ಮುಂಡಿಗೆಗಳು ಎಂದರೆ ಕಠಿನವಾದ ತೆಂಗಿನಚಿಪ್ಪಿನೊಳಗಿರುವ ತಿರುಳು ಮತ್ತು ಎಳನೀರಿನಂತೆ ಹಿತವಾದದ್ದು ಎಂಬುದು ಸರ್ವ ಸಮ್ಮತವಾದ ವಿಚಾರವಲ್ಲವೇ?
ಆಧಾರ:- ಡಾ. ಸುಧಾ ಸಂ. ಕೌಜಗೇರಿಯವರ ಲೇಖನ
ಬಗೆ
- Log in to post comments