ಹೊರಗ್ಹೋಗಿ ಆಡದಿರ್ ಹರಿಯೆ
( ರಾಗ ಆನಂದಭೈರವಿ ಛಾಪು ತಾಳ)
ಹೊರಗ್ಹೋಗಿ ಆಡದಿರ್ ಹರಿಯೆ ಎನ್ನ ದೊರೆಯೆ, ನೆರೆ-
ಹೊರೆಯವರು ಕಂಡರೆ ದೂರುವುದರಿಯೆ ||ಪ||
ಮನೆಯೊಳಗಾಡೋದೆ ಚಂದ, ನೆರೆ
ಮನೆಗಳಿಗೆಲ್ಲ ಪೋಗುವರೆ ಮುಕುಂದ
ಮಾನಿನಿಯರು ಮೋಹದಿಂದ ನಿನ್ನ
ಮನವನಪಹರಿಸಿಕೊಂಬುವರೊ ಗೋವಿಂದ ||
ಏನೇನು ಬೇಕಾದ್ದು ಕೊಡುವೆ, ಕೆನೆ
ಬೆಣ್ಣೆ ಸಕ್ಕರೆ ತಂದು ಕೈಯಲ್ಲಿ ಕೊಡುವೆ
ಅನುದಿನ ಗುಣಗಳ ಪಾಡುವೆ ,ನಿನ-
ಗನುವಾಗಿ ಅಲಂಕಾರ ಮಾಡಿ ನಾ ನೋಡುವೆ ||
ಹೊಲಸು ಮೈಯವನೆಂಬುವರೊ, ದೊಡ್ಡ
ಕುಲಗಿರಿಯನ್ನು ಎತ್ತಿದವನೆಂಬುವರೊ
ಬಲುಕೇಶದನೆಂಬುವರೊ, ಕರುಳ
ಮಾಲೆಯ ಹಾಕಿದ ಘೋರನೆಂಬುವರೊ ||
ಭಿಕ್ಷೆ ಬೇಡಿದವನೆಂಬುವರೊ, ಭುವಿ
ರಕ್ಷಿಪ ರಾಯರ ಕಡಿದನೆಂಬುವರೊ
ಲಕ್ಷ್ಮಿಯ ಕಳೆದನೆಂಬುವರೊ ವೈ-
ಲಕ್ಷಣ್ಯದವ ಬೆಣ್ಣೆಕಳ್ಳನೆಂಬುವರೊ ||
ಮಾನ ಬಿಟ್ಟವನೆಂಬುವರೊ, ಮಹಾ
ಹೀನರ ಹಿಂದಟ್ಟಿ ಹೋದನೆಂಬುವರೊ
ದಾನವವೈರಿಯೆಂಬುವರೊ, ಸಿರಿ
ವನಜಾಕ್ಷ ಪುರಂದರವಿಠಲನೆಂಬುವರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments