ಹೆಮ್ಮೆಯಾಡಲು ಬೇಡಿ

ಹೆಮ್ಮೆಯಾಡಲು ಬೇಡಿ

(ರಾಗ ಮುಖಾರಿ ಝಂಪೆ ತಾಳ) ಹೆಮ್ಮೆಯಾಡಲು ಬೇಡಿ, ಹೆಮ್ಮೆ ನೀಡಾಡುವುದು ಹೆಮ್ಮೆಯಿಂದಲಿ ನೀವು ಕೆಡಬೇಡಿರಯ್ಯ ||ಪ|| ಮುನ್ನೊಮ್ಮೆ ರಾವಣನು ಜನಕನ ಸಭೆಯಲ್ಲಿ ತನ್ನಳವನರಿಯದೆ ಧನುವೆತ್ತಲು ಉನ್ನತದ ಧನು ಎದೆಯ ಮೇಲೆ ಬೀಳಲು, ಬಲು ಬನ್ನಬಟ್ಟುದ ನೀವು ಕೇಳಿ ಬಲ್ಲಿರಿಯಾ || ಕುರುಪನ ಸಭೆಯಲ್ಲಿ ಕೃಷ್ಣ ತಾ ಬರಲಾಗಿ ಕರೆದು ಮನ್ನಣೆಯ ತಾ ಮಾಡದಿರೆ ಧರೆಗೆ ಶ್ರೀ ಕೃಷ್ಣನಂಗುಷ್ಠವನೊತ್ತಲು ಅರಸು ಸಿಂಹಾಸನದಿಂದ ಬಿದ್ದುರುಳಾಡಿದ || ಅತಿ ವೇಗದಲಿ ಕೃಷ್ಣ ಸತ್ಯಭಾಮೆ ಕರೆದು ಸತಿ ಸೀತೆಯಾಗೆಂದು ನೇಮಿಸಲಾಗ ಮತಿವಂತೆ ಬಗೆ ಬಗೆ ಶೃಂಗಾರವಾದರು ಸೀತಾ ಸ್ವರೂಪವು ತಾನಾಗಲಿಲ್ಲ || ಹನುಮನ ಕರೆಯೆಂದು ಗರುಡನ ಅಟ್ಟಲು ಮನದಲ್ಲಿ ಕಡು ಕೋಪದಿಂದ ನೊಂದು ವನಚರ ಬಾಯೆಂದು ಗರುಡ ತಾ ಕರೆಯಲು ಹನುಮಂತ ಗರುಡನ ತಿರುವಿ ಬೀಸಾಡಿದ || ಇಂತಿಂಥ ದೊಡ್ಡವರು ಈ ಪಾಡು ಪಡಲಾಗಿ ಪಂಥಗಾರಿಕೆ ತರವೆ ಅಲ್ಪ ಜನಕೆ ಸಂತ ಜನರೊಡೆಯ ನಮ್ಮ ಪುರಂದರ ವಿಠಲನ ಸಂತತ ಮನದಲಿ ಚಿಂತಿಸಿ ಸುಖಿಸಿರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು