ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ

 ರಾಗ ಬಿಲಹರಿ - ಆದಿತಾಳ. 

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು? 
ಸತ್ಯ ಸದಾಚಾರ ಇಲ್ಲದವನು ಜಪ
ಹತ್ತು ಸಾವಿರ ಮಾಡಿ ಫಲವೇನು?||೧||

ತನ್ನ ಸತಿ ಸುತರು ಬಂಧುಗಳ ನೋಯಿಸಿ 
ಚಿನ್ನ ದಾನವ ಮಾಡಿದರೆ ಫಲವೇನು?
ಬಿನ್ನಣದಿಂದಲಿ ದೇಶ ದೇಶವ ತಿರುಗಿ 
ಅನ್ನ ದಾನವ ಮಾಡಿ ಫಲವೇನು?||೨||

ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು?
ತಾಪತ್ರಯದ ಸಂಸಾರ ಕೆಡಿಸುವಂಥ 
ಪಾಪಿ ಮಗನು ಇದ್ದು ಫಲವೇನು? ||೩||

ತಾಂಡವ ಧನದಿಂದ ತಂದೆ ಮಾತು ಕೇಳದ
ತುಂಡು ಮಗನು ಇದ್ದು ಫಲವೇನು?
ಭಂಡುಮಾಡಿ ಅತ್ತಿ ಮಾವನ ಬೈವ
ಮಂಡ ಸೊಸೆಯಿದ್ದು ಫಲವೇನು? ||೪||

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು 
ಕಾನನದೊಳಗಿದ್ದು ಫಲವೇನು?
ಆನಂದ ಮೂರುತಿ ಪುರಂದರ ವಿಠಲನ 
ನೆನೆಯದ ತನುವಿದ್ದು ಫಲವೇನು? ||೫||

ದಾಸ ಸಾಹಿತ್ಯ ಪ್ರಕಾರ
ಬರೆದವರು