ಹೆಂಡಿರನಾಳುವಳೀ ಕನ್ನಿಕೆ
( ರಾಗ ಶಂಕರಾಭರಣ. ಅಟ ತಾಳ)
ಹೆಂಡಿರನಾಳುವಳೀ ಕನ್ನಿಕೆ
ಗಂಡನಿಲ್ಲದ ಹೆಂಗಸೀ ಕನ್ನಿಕೆ ||ಪ||
ಮೇರು ಮಂದರವ ಕಡೆಗೋಲನೆ ಮಾಡಿ
ಉರಗ ವಾಸುಕಿ ನೇಣಮಾಡಿ
ಕ್ಷೀರಾಂಬುಧಿ ಸುರರಸುರರು ಮಥಿಸಲು
ಕೂರುಮ ರೂಪವ ಧರಿಸಿದ ಕನ್ನಿಕೆ ||
ಶಿಶುರೂಪ ತಾಳಿ ಆಲದೆಲೆಯ ಮೇಲೆ
ಆ ಸಮಯ ಜಲದೊಳು ಮಲಗಿಕೊಂಡು
ವಶವಾಗದ ಮುನ್ನ ಹೂವಿನ್ಹೊಕ್ಕಳಲ್ಲಿ
ಬಸಿರಿಂದ ಬೊಮ್ಮನ ಪಡೆದಾ ಕನ್ನಿಕೆ ||
ಪಟ್ಟಾವಳಿಯನುಟ್ಟು ಬೊಟ್ಟಾ ಕುಪ್ಪಸ ತೊಟ್ಟು
ಬೊಟ್ಟ ಗಿಂಡಿಯ ಕೈಲಿ ಪಿಡಿದುಕೊಂಡು
ದಿಟ್ಟ ಸ್ತ್ರೀ ರೂಪವ ತಾಳಿ ದೈತ್ಯರನೆಲ್ಲ
ಅಟ್ಟಹಾಸದಿ ಮೋಹಿಸಿದ ಕನ್ನಿಕೆ ||
ಅಂಥ ಇಂಥವನೆಂದು ಕೇಳುತ್ತ ಇರಲಾಗಿ
ಸಂತತ ಸುರರಿಗೆ ಅಮೃತವನು
ಪಂಕ್ತಿಯೊಳಗೆ ಅಳವಡಿಸದೆ ಬಡಿಸಿದ
ಎಂಥಾ ಸೊಬಗಿನ ಮೋಹದ ಕನ್ನಿಕೆ ||
ಬೇಗೆಗಣ್ಣನಿಗೆ ಬಿಸಿ ಕೈಯನಿಡಲು ಬರೆ
ಭೋಗದಾಸೆಯ ತೋರಿ ಬೂದಿ ಮಾಡ್ದ
ಭಾಗೀರತಿಯ ಪಿತ ಪುರಂದರವಿಠಲ
ಭೋಗಿ ಬೇಲೂರ ಚೆನ್ನಿಗ ಕನ್ನಿಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments