ಹೆಂಡತಿ ಪ್ರಾಣ ಹಿಂಡುತಿ
( ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ)
ಹೆಂಡತಿ, ಪ್ರಾಣ ಹಿಂಡುತಿ ||ಪ||
ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ||
ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿ
ಹೊತ್ತು ಹೋಯಿತು ಭತ್ಯ ತಾರೆನ್ನುತ್ತಿ
ಉತ್ತಮ ಗುರುಹಿರಿಯರ ಮಾತು ಮೀರುತ್ತಿ
ಮೃತ್ಯು ದೇವತೆಯಂತೆ ಮನೆಯೊಳಗಿರುತ್ತಿ ||
ಇಲ್ಲದ್ದು ಬೇಡುತ್ತಿ ಸುಳ್ಳು ಮಾತಾಡುತ್ತಿ
ಒಳ್ಳೆ ಊಟವನುಂಡು ಕುಳಿತಿರ್ಪೆನೆಂತಿ
ಎಳ್ಳಿನಷ್ಟು ಕೆಲಸ ಮಾಡಲಾರೆನೆಂತಿ
ಎಲ್ಲೆಲ್ಲಿ ತಲೆಯೆತ್ತದ್ಹಾಂಗೆ ಮಾಡುತ್ತಿ ||
ಹಿರಿತನಕ್ಹೋಗುತ್ತಿ ಗರುವಿಕೆ ಮಾಡುತ್ತಿ
ನೆರೆಹೊರೆಯರ ಕೂಡ ಬಡಿದಾಡುತ್ತಿ
ದೊರೆ ಸಿರಿಪುರಂದರವಿಠಲನ ಸ್ಮರಿಸದೆ
ದುರಿತಕ್ಕೆ ಗುರಿಯಾಗಿ ನೀ ನಿಲ್ಲುತ್ತಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments