ಹುಚ್ಚು ಹಿಡಿಯಿತು ಎನಗೆ

ಹುಚ್ಚು ಹಿಡಿಯಿತು ಎನಗೆ

( ರಾಗ ಗೌಳಿಪಂತು ಆದಿ ತಾಳ) ಹುಚ್ಚು ಹಿಡಿಯಿತು ಎನಗೆ, ಹುಚ್ಚು ಹಿಡಿಯಿತು ||ಪ|| ಅಚ್ಯುತನ ಧ್ಯಾನವೆಂಬೊ ಅಚ್ಚುಮೆಚ್ಚು ತಲೆಗೆ ಏರಿ ||ಅ || ವಾಸುದೇವನೆಂಬ ನಾಮ ವದನದಲ್ಲಿ ಒದರುವೆ, ಮಾಯಾ ಪಾಶವೆಂಬೊ ಅಂಗಿಯನ್ನು ಹರಿದು ಹರಿದು ಹಾಕುವೆ ಕೇಶವನ ಹುವ್ವ ಮುಡಿದು ಕುಣಿದು ಕುಣಿದು ಆಡುವೆ, ಕೆಟ್ಟ ದೋಷವೆಂಬೊ ಗೊಡೆಯನ್ನು ಕೆದರಿ ಕೆದರಿ ಹಾಕುವಂಥ || ಕೃಷ್ಣನಂಘ್ರಿಕಮಲದಲ್ಲಿ ಸೊರಗಿ ಬೀಳುವೆ, ಭವ ಕಷ್ಟವೆಂಬೊ ಕುಂಭವನ್ನು ಒಡೆದು ಒಡೆದು ಹಾಕುವೆ ನಿಷ್ಟರನ್ನು ಕಂಡು ಅವರ ಹಿಂದೆ ಹಿಂದೆ ತಿರುಗುವೆ, ಕಡು ದುಷ್ಟರನ್ನು ಕಂಡು ನಾನು ಕಲ್ಲು ಕಲ್ಲು ಬೀರುವಂಥ || ಮಂದಮತಿಗಳನ್ನು ಕಂಡು ಮೂಕನಾಗಿ ಇರುವೆ, ಹರಿಯ ನಿಂದೆ ಮಾಡಿದವನ ಮೇಲೆ ಮಣ್ಣು ಮಣ್ಣು ಚೆಲ್ಲುವೆ ಬಂಧು ಬಳಗದವರೊಳುದಾಸೀನನಾಗಿ ಬಾಳುವೆ, ಎನ್ನ ತಂದೆ ಪುರಂದರವಿಠಲನ್ನ ನೆನೆದು ಕುಣಿದು ಆಡುವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು