ಹಿಗ್ಗುವೆ ಏತಕೋ ಈ ದೇಹಕ್ಕೆ
(ರಾಗ ಭೈರವಿ. ಅಟ ತಾಳ )
ಹಿಗ್ಗುವೆ ಏತಕೋ, ಈ ದೇಹಕ್ಕೆ
ಹಿಗ್ಗುವೆ ಯಾಕೋ ||ಪ||
ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ
ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ ||ಅ.ಪ||
ಸತಿ ಪುರುಷರು ಕೂಡಿ ರತಿ ಕ್ರೀಡೆಗಳ ಮಾಡಿ
ಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ ||೧||
ಆಗಭೋಗಗಳನ್ನು ಆಗುಮಾಡುತಲಿದ್ದು
ರೋಗ ಬಂದರೆ ಬಿದ್ದು ಹೋಗುವ ದೇಹಕ್ಕೆ ||೨||
ಪರರ ಸೇವೆಯ ಮಾಡಿ ನರಕ ಭಾಜನನಾಗಿ
ಮರಳಿ ಮರಳಿ ಬಿದ್ದು ಉರುಳುವ ದೇಹಕ್ಕೆ ||೩||
ಸೋರುವುದೊಂಭತ್ತು ದ್ವಾರದಿಂದಲಿ ಮಲ
ನೀರಿಲ್ಲದಿದ್ಧರೆ ನಾರುವ ದೇಹಕ್ಕೆ ||೪||
ಪುರಂದರ ವಿಠಲನ ಚರಣ ಕಮಲಕ್ಕೆ
ಎರಗದೆ ಇರುತಿಹ ಗರುವದ ದೇಹಕ್ಕೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments