ಹರಿ ನೀನೆ ಗತಿಯೆಂದು

ಹರಿ ನೀನೆ ಗತಿಯೆಂದು

( ರಾಗ ಧನಶ್ರೀ. ಅಟ ತಾಳ) ಹರಿ ನೀನೆ ಗತಿಯೆಂದು ನೆರೆ ನಂಬಿದವರನು ಮರೆತಿರುವುದು ನ್ಯಾಯವೆ ||ಪ|| ಗರುಡಗಮನ ನೀ ಸಿರಿಲೋಲನಾಗಿರೆ ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ||ಅ|| ಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವ ದೃಷ್ಟಿ ಎನ್ನೊಳಗಿದೆಯ ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನ ದುಷ್ಟಕರ್ಮವ ಬಿಡಿಸಿ ದಿಟ್ಟನೆಂದನಿಸೊ || ಭುಜಗಶಯನ ನಿನ್ನ ಭಜಕರ ಹೃದಯದಿ ನಿಜವಾಗಿ ನೀನಿಲ್ಲವೆ ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನ ಸುಜನಪಾಲಕನೆಂದು ಭಜನೆ ಮಾಳ್ಪುದು ಕಂಡು || ಭಾಗವತರರಸನೆ ಯೋಗಿಗಳೊಡೆಯನೆ ಬಾಗಿ ಬಿನ್ನವಿಪೆ ನಿನ್ನ ಸಾಗರಶಯನನೆ ನೀಗಿಸಿ ಶ್ರಮವನು ಜಾಗು ಮಾಡದೆ ಎನ್ನ ಬೇಗದಿ ಕಾಯಯ್ಯ || ತುಂಟರೈವರ ತುಳಿದು ಕಂಟಕೊಬ್ಬನ ಕಳೆದು ಎಂಟು ಮಂದಿಯ ಗರ್ವವನಳಿದು ನೆಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ ಉಂಟಾದ ವೈಕುಂಠಬಂಟನೆಂದೆನಿಸೊ || ಧರಣಿಯೊಳಗೆ ನೀ ಸುಜನರ ಸಲಹುವ ಬಿರುದು ಪಡೆದವನಲ್ಲವೆ ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೋ ಪರಮಪುರುಷ ಸಿರಿ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು