ಹರಿಯ ದಿವ್ಯ ನಾಮ

ಹರಿಯ ದಿವ್ಯ ನಾಮ

( ರಾಗ ಉದಯರಾಗ. ಆಟ ತಾಳ) ಹರಿಯ ದಿವ್ಯ ನಾಮ ||ಪ|| ಹರಿಯ ದಿವ್ಯ ನಾಮ ಮರೆದು ಬಾಯಲಿ ಬರೆ ಮರೆದೊಮ್ಮೆ ಜನ್ಮ ತಾನೆಲ್ಲಿಹುದೊ ||ಅ|| ನಾರಗಾನೆನ್ನಲು ಕೇಳಿ ನಾರಾಯಣ ಕ್ಷೀರಸಾಗರದಲ್ಲಿ ಮಲಗಿರಲು ಬೇಗದಿಂದಲೆ ಒಡಗೊಂಡು ಬನ್ನಿರೊ ಅಜಮಿಳನ ಬಾಧಿಸುತ ಧರೆ ಯಮದೂತರು || ಅಚ್ಚ ತುಲಸಿ ದಂಡೆ ಹಸ್ತದಲಿ ಶಂಖ ಚಕ್ರ ಒಪ್ಪುವ ಊರ್ಧ್ವಪುಂಡ್ರ ವಜ್ರಪಂಜರ ವಿಷ್ಣು ಸರ್ವೋತ್ತಮ ಕರುಣಾಕರ ಹರಿಯೆಂದು ಕೃಷ್ಣರಾಯರ ಸ್ತುತಿಸುತ ಬಂದರಯ್ಯ || ಅಂಜದಿರಂಜದಿರಜಮಿಳನೆ ಗೋವಿಂದ ನಿಮ್ಮನು ಕರೆಸಿದರು ಬಾರಯ್ಯ ಕೊಂಡ್ಹೋಗಿ ಲಕ್ಷ್ಮೀಪತಿಯಿದ್ದಲ್ಲಿಗೆ ಬಂದರೆ ಪುಷ್ಪಕವಿಮಾನದೊಳು ನಿಂದಿರಿಸುವ || ಪಾತಕವು ಹರಿದವು ದೂತರೋಡಿದರು ಸಾತ್ವಿಕ ಧರ್ಮಿಯೆಂದೆನಿಸಿಕೊಂಡೆ ಶ್ರೀ- ಪತಿಯ ಪುಷ್ಪಕವನೇರಿ ವೈಕುಂಠಯಾತ್ರೆ ಮಾಡಿದಜಮಿಳನು || ಸಕಲಪಾಪವು ಮಾಡಿದಜಮಿಳನು ಅಮಲಕೀರ್ತಿ ಪಡೆದು ಬಂದ ನೋಡಿರೊ ಲಕ್ಷ್ಮೀನಾರಾಯಣ ಪುರಂದರವಿಠಲನ್ನ ಭಕ್ತವತ್ಸಲನೆಂಬ ಬಿರುದಲ್ಲವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು