ಹರಿನಾರಾಯಣ ಹರಿನಾರಾಯಣ (೧)

ಹರಿನಾರಾಯಣ ಹರಿನಾರಾಯಣ (೧)

( ರಾಗ ಶಂಕರಾಭರಣ. ಆದಿ ತಾಳ) ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೆ ||ಪ|| ದುರಿತಶರಧಿಯನುತ್ತರಿಸಬೇಕಾದರೆ ಸಿರಿಯರಸನ ನುತಿಸಿರು ಮನವೆ||ಅ|| ಘೋರತರದ ಸಂಸಾರವು ದುಃಖದ ವಾರಿಧಿ ಇದರೊಳಗೇನುಂಟು ಮೂರುದಿನದ ಬಾಳಿಕೆ ಇದರೊಳಗಾರೈಸುವುದೇತರ ನಂಟು ತೋರುವ ಸಿರಿಸಂಪತ್ತಿನ ನೆಲೆಯು ವಿಚಾರಿಸಲದು ಕನಸಿನ ಗಂಟು ಮಾರಮಣನ ಮನಮುಟ್ಟಿ ಭಜಿಸಿದರೆ ಕಾರಣ ಮುಕುತಿಗೆ ಕಡೆವುಂಟು || ಲೆತ್ತಪಗಡೆ ಚತುರಂಗ ಜೂಜಾಟದಿ ಹೊತ್ತು ಕಳೆವುದೇಕೆ ನೀನು ಸುತ್ತಿ ಸುತ್ತಿ ಸುಳಿದು ಬಳಲುತ್ತ ಮಾಡಿದ ಗೃಹಕೃತ್ಯದಿ ನಿನಗಿಹ ಫಲವೇನು ಅತ್ಯಾತುರದಿಂದ ಗಳಿಸಿದ ಆರ್ಜನೆ ಹತ್ತಿ ಸಂಗಡ ಬರುವುದೇನು (ಕತ್ತಲೆಯೊಳು ಕಣ್ಣನು ತೆರೆದಂದದಿ ವ್ಯರ್ಥದಿ ಸಂಗ್ರಹಿಸುವುದೇನು) ಮೃತ್ಯುಭಯವ ನೀ ಜಯಿಸಬೇಕಾದರೆ ಪುರುಷೋತ್ತಮಗೆ ಶರಣೆನ್ನು || ಕೂಳಿನ ಬಲದಲಿ ಬೆಳೆದೀ ಕಾಯವಿದು ಬಾಳುವೆಯೆಂಬುದು ಸ್ಥಿರವಲ್ಲ ಮಾಳಿಗೆ ಮನೆ ಉಪ್ಪರಿಗೆ ಕೋಣೆಯು ನಾಳೆಗೆ ಅಲ್ಲಿಗೆ ಬರೋದಿಲ್ಲ ಜಾಳಿಗೆ ತುಂಬಿದ ಹೊನ್ನಾಭರಣವು ನಾಳೆಗೆ ಸಂಗಡ ಬಾಹೋದಲ್ಲ ಕಾಲನ ಭಯವನು ಕಳೆಯಬೇಕಾದರೆ ನಾಲಿಗೆಯಲಿ ಸ್ಮರಿಸಿರಿ ಸೊಲ್ಲ || ಮಡದಿಮಕ್ಕಳು ಮಮಕಾರದಲ್ಲಿ ಮನವಿಡುತಲಿ ನೀನಿರಬೇಡ ಬಿಡಲಾರದ ಮಾಯಾಪಾಶಕೆ ಸಿಲುಕಿ ಕಡುಲೋಭಿಯಾಗಿ ನೀ ಕೆಡಬೇಡ ತಡೆಯದೆ ಯಮನ ದೂತರು ಬಂದು ಎಳೆವಾಗ ಅವರಲಿ ಸಿಗಬೇಡ ಕಡಲಶಯನನ ಭಜಿಸಲು ಮುಕ್ತಿಯ ಪಡೆಯಬಹುದು ನುತಿಸೊ ಗಾಢ || ಕುಮತಿಗಳರಿಷಡ್ವರ್ಗ ಪರಾಕ್ರಮ ಗತಿಗಳನೆಲ್ಲವು ನೀ ಕ್ಷಮಿಸೊ ಭ್ರ್‍ಅಮೆಗೊಳಿಸುವ ಮಾಯೇಂದ್ರಿಯಂಗಳ ತವಕವಿಲ್ಲದಲೆ ನೀ ನಿಲಿಸೊ ಯಮನಾಳ್ಗಳು ಹಿಮ್ಮೆಟ್ಟುತಲಿಹರೊ ಕ್ರಮಕರ್ಮಗಳ ನಿಲ್ಲದೆ ನಡೆಸೊ ಅಮಿತಪರಾಕ್ರಮ ಪುರಂದರವಿಠಲನ ಪಾದಧ್ಯಾನದೊಳ್ ಮನವಿರಿಸೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು