ಹರಿದಾಸರ ಸಂಗ ದೊರಕಿತು

ಹರಿದಾಸರ ಸಂಗ ದೊರಕಿತು

( ರಾಗ ಆರಭಿ. ಅಟ ತಾಳ) ಹರಿದಾಸರ ಸಂಗ ದೊರಕಿತು ಎನಗೀಗ ಇನ್ನೇನಿನ್ನೇನು ವರಗುರು ಉಪದೇಶ ನೆರವಾಯ್ತು ಎನಗೆ ಇನ್ನೇನಿನ್ನೇನು ||ಪ|| ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನು ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲೆಸಿತು ಇನ್ನೇನಿನ್ನೇನು || ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನು ಜಲಜನಾಭನ ಧ್ಯಾನ ಹೃದಯದೊಳ್ ದೊರಕಿತು ಇನ್ನೇನಿನ್ನೇನು || ತಂದೆತಾಯಿ ಮುಚುಕುಂದ ವರದನಾದ ಇನ್ನೇನಿನ್ನೇನು ಸಂದೇಹವಿಲ್ಲ ಮುಕುಂದ ದಯಮಾಡ್ದ ಇನ್ನೇನಿನ್ನೇನು || ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು ಆನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು || ಎನ್ನ ವಂಶಗಳೆಲ್ಲ ಪಾವನವಾದವು ಇನ್ನೇನಿನ್ನೇನು ಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು