ಹರಿಚಿತ್ತ ಸತ್ಯ
( ರಾಗ ಪೂರ್ವಿಕಲ್ಯಾಣಿ. ಅಟ ತಾಳ)
ಹರಿಚಿತ್ತ ಸತ್ಯ ಹರಿಚಿತ್ತ ||ಪ||
ನರಚಿತ್ತಕೆ ಬಂದದ್ದು ಲವಲೇಶ ನಡೆಯದು ||ಅ|
ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ
ಮದುವ್ಯಾಗದಿರುವುದು ಹರಿಚಿತ್ತವು
ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪದಚಾರಿಯಾಗೋದು ಹರಿಚಿತ್ತವಯ್ಯ ||
ವಿಧವಿಧ ಯಾತ್ರೆಯ ಬಯಸೋದು ನರಚಿತ್ತ
ಒದಗಿ ಬರುವ ರೋಗ ಹರಿಚಿತ್ತವು
ಸದಾ ಅನ್ನದಾನವ ಬಯಸೋದು ನರಚಿತ್ತ
ಉದರಕ್ಕೆ ಅಳುವುದು ಹರಿಚಿತ್ತವಯ್ಯ ||
ಧರಣಿಯನಾಳಬೇಕೆಂಬುದು ನರಚಿತ್ತ
ಪರರ ಸೇವಿಸುವುದು ಹರಿಚಿತ್ತವು
ಪುರಂದರವಿಠಲನ ಬಯಸೋದು ನರಚಿತ್ತ
ದುರಿತವ ಕಳೆವುದೆ ಹರಿಚಿತ್ತವಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments