ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ

ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ

(ರಾಗ ರೇಗುಪ್ತಿ ಮತ್ತು ಪೂರ್ವಿ , ಆದಿತಾಳ) ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ ಅರಿಯದ ಮೂಢಮನುಜನಿಗೆ ಪೇಳಲು ಹರುಷವಾಗಬಲ್ಲುದೆ ||ಪ|| ಅಂದುಗೆ ಅರಳೆಲೆ ಇಟ್ಟರೆ ಕೋಡಗ ಕಂದನಾಗಬಲ್ಲುದೆ ಹಂದಿಗೆ ಸಕ್ಕರೆ ತುಪ್ಪವ ತಿನಿಸಲು ದಂತಿಯಾಗಬಲ್ಲುದೆ ಚಂದಿರ ಕಿರಣವ ನೋಡಲು ಅಂಧಕ ಅಂದವರಿಯಬಲ್ಲನೇ ಇಂದಿರೆಯರಸನ ಮಹಿಮೆಯ ಮಂದ ಮನುಜ ಬಲ್ಲನೇ ||೧|| ಉರಗಗೆ ಕ್ಷೀರವನೆರೆಯಲು ವಿಷ ತಾ ಹರಿದುಹೋಗಬಲ್ಲುದೆ ಭರದಿಂದ ಶುನಕನ ಬಾಲವ ತಿದ್ದಲು ಸರಳವಾಗಬಲ್ಲುದೆ ಪರಿಪರಿ ಬಂಗಾರವ ಇಡೆ ದಾಸಿಯು ಅರಸಿಯಾಗಬಲ್ಲಳೆ ಭರದಿಂದ ನೀಲಿಯ ತೊಳೆಯಲು ಅದರಾ ಕರಿದು ಹೋಗಬಲ್ಲುದೆ ||೨|| ಮೋಡಕೆ ಮೋರವು ಕುಣಿಯಲು ಕುಕ್ಕುಟ ನೋಡಿ ಕುಣಿಯಲುಬಲ್ಲುದೆ ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಕೊಡಲು ಬಲ್ಲುದೆ ಹಾಡಿನ ಕುಶಲವ ಬಧಿರಗೆ ಪೇಳಲು ಕೇಳಿ ಸುಖಿಸಬಲ್ಲನೆ ಮೂಡಲ ಗಿರಿ ತಿಮ್ಮಪ್ಪನ ಮಹಿಮೆಯ ಮೂಢ ಮನುಜ ಬಲ್ಲನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು