ಹತ್ತಿಗಿಡದ ಕೊನೆ ಹಗೆಯಾಗಿ
( ರಾಗ ಸೌರಾಷ್ಟ್ರ. ಅಟ ತಾಳ)
ಹತ್ತಿಗಿಡದ ಕೊನೆ ಹಗೆಯಾಗಿ ಬಿಡದೆ ಮೇಲಿನ್ನೇನಿನ್ನೇನು
ಸಮಸ್ತರು ಹಗೆಯಾಗಿ ಸಾಧಿಸಿದ ಮೇಲಿನ್ನೇನಿನ್ನೇನು ||ಪ||
ಗಂಡು ಮಕ್ಕಳೆಂಬೋರು ಪುಂಡರಾದ ಮೇಲಿನ್ನೇನಿನ್ನೇನು
ಭಂಡು ಸಂಸಾರವು ಬಯಲಿಗೆ ಬಿದ್ದ ಮೇಲಿನ್ನೇನಿನ್ನೇಲು ||
ನಗುವರ ಮುಂದಿಷ್ಟು ತಗಲಿ ಬಿದ್ದ ಮೇಲಿನ್ನೇನಿನ್ನೇನು
ನಗುವವರಿಗೆ ನಾಲ್ಕು ನಾಲಿಗೆಯಾದ ಮೇಲಿನ್ನೇನಿನ್ನೇನು ||
ಮಾಡಿದ ಗಣಪತಿ ಮಂಗನಾದ ಮೇಲಿನ್ನೇನಿನ್ನೇನು
ಊಡಿದ ಮಕ್ಕಳು ಬಿಡದೆ ಕಚ್ಚಿದ ಮೇಲಿನ್ನೇನಿನ್ನೇನು ||
ಬಾವಿ ತೋಡಿದರೆ ಬೇತಾಳ ಹೊರಟ ಮೇಲಿನ್ನೇನಿನ್ನೇನು
ಕಾವ ಬೇಲಿ ಎದ್ದು ಹೊಲವ ಮೇದ ಮೇಲಿನ್ನೇನಿನ್ನೇನು ||
ಹಾರೈಸಿದೆಲ್ಲವು ಹಳವಂಡವಾದ ಮೇಲಿನ್ನೇನಿನ್ನೇನು
ಆಲೈಸಿ ಕೇಳಯ್ಯ ಪುರಂದರವಿಠಲ ಇನ್ನೇನಿನ್ನೇನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments