ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ

ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ

( ರಾಗ ಪಂತುವರಾಳಿ/ಕಾಮವರ್ಧಿನಿ ಛಾಪು ತಾಳ) ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ ||ಪ|| ಹಣ್ಣು ಎಂಬೊ ಹರಿನಾಮ ಎಂಬೊ ಶ್ರುತಿಯ ನಿಂಬೆಯ ||ಅ|| ಮನದ ಭೂಮಿಯಲಿ ಪುಟ್ಟಿ ಮತಿಗಳಿಂದ ಪಲ್ಲವಿಸಿ ತಮಗೆ ತಮಗೆ ತಿಳಿದ ಹೊತ್ತು ಭಕುತಿಯಿಂದಲಿ ಒಲಿದು ಗೊಂಚಲಾದ ಹಣ್ಣು ಜ್ಞಾನವೆಂಬೊ ಪಂಜರದ ತಿಳಿದು ನಾಲಿಗೆಯೆ ಮೇಲೆ ಬಂದು ಕುಳಿತ ಬಾಳೆಯ || ಒಂದು ವರುಷ ಒಂದು ಫಲವು ಬಿತ್ತಿ ಬಂದ ಮಹಾ ರಾಮ- ಚಂದ್ರನೆಂಬೊ ಕಲ್ಪವೃಕ್ಷ ಕದಳಿ ಸಂತತಿ ಕುಂದದಿಹುದು ಸಕಲಫಲವು ಅಲ್ಲಿ ಗೊನೆಗೂಡಿ ಗೋ- ವಿಂದ ರಾಮ ವಾಸುದೇವನೆಂಬೊ ಹಲಸಿನ || ಹರಿಯ ನಾಮವನ್ನು ನಿತ್ಯ ಸ್ಮರಿಸಬಲ್ಲ ವಿಪ್ರರಿಗೆ ಸುರರು ಮುನಿಗಳೆಲ್ಲ ಬಾಗುವರಲ್ಲಯ್ಯ ಗಿರಿಯ ಮೇಲಿಪ್ಪ ಅಲಮೇಲುಮಂಗ ಅರಸನಾದ ಪುರಂದರವಿಠಲನೆಂಬೊ ಜಂಬುನೇರಳೆ || ಇನ್ನೂ ಒಂದು ಪಾಠಾಂತರ ಇದೆ . ------------------------------------- ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು || ಪ || ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು ಭವರೋಗಗಳನೆಲ್ಲ ಕಳೆವ ಹಣ್ಣು ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು ಅವನಿಯೊಳ್ ಶ್ರೀರಾಮನೆಂಬೊ ಹಣ್ಣು || ೧ || ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ ಕಳೆದು ಬಿಸಾಡಿಸಿ ಕೊಳ್ಳುವುದಲ್ಲ ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ ಒಳಿತಾದ ಹರಿಯೆಂಬೊ ಮಾವಿನಹಣ್ಣು || ೨ || ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ ಸೃಷ್ಟಿಯೊಳಗೆ ನಮ್ಮ ಪುರಂದರ ವಿಟ್ಠಲ ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ್ಣು || ೩ || ಶ್ರೀವತ್ಸ ಜೋಷಿಯವರು ಸಂಪದದಲ್ಲಿ http://sampada.net/forum/12309 ಅಡಿಯಲ್ಲಿ ಇದನ್ನು ಹಾಕಿದ್ದಾರೆ . ಅಲ್ಲೂ ನೋಡಿ .
ದಾಸ ಸಾಹಿತ್ಯ ಪ್ರಕಾರ
ಬರೆದವರು