ಹಣ್ಣು ಬಂದಿದೆ ಕೊಳ್ಳಿರೋ
( ರಾಗ ಬಿಲಹರಿ. ಅಟ ತಾಳ)
ಹಣ್ಣು ಬಂದಿದೆ ಕೊಳ್ಳಿರೋ ನೀವೀಗ
ಚೆನ್ನ ಬಾಲಕೃಷ್ಣನೆಂಬೊ ಕನ್ನೆ ಬಾಳೆ ||ಪ||
ಹವ್ಯಕವ್ಯದ ಹಣ್ಣು, ಸವಿ ಸಕ್ಕರೆ ಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು
ನವನೀತ ಚೋರನೆಂಬೊ ಜವನ ಅಂಜಿಪ ಹಣ್ಣು
ಅವನಿಯೊಳು ಶ್ರೀರಾಮನೆಂಬೊ ಹಣ್ಣು ||
ಕೊಳೆತು ಹೋಗುವುದಲ್ಲ, ಹುಳುತು ಹೋಗುವುದಲ್ಲ
ಕಳೆದು ಬಿಸಾಡಿಸಿಕೊಳ್ಳುವುದಲ್ಲ
ಅಳತೆ ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೋದಲ್ಲ
ಒಳಿತಾದ ಹರಿಯೆಂಬೊ ಮಾವಿನ ಹಣ್ಣು ||
ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ
ಕಷ್ಟದಿ ಹಣ ಕೊಟ್ಟು ಕೊಂಬುವುದಲ್ಲ
ಸೃಷ್ಟಿಯೊಳಗೆ ನಮ್ಮ ಪುರಂದರವಿಟ್ಠಲ
ಕೃಷ್ಣರಾಯನೆಂಬೊ ಶ್ರೇಷ್ಠಾದ ಹಣ್ಣು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments