ಹಣ್ಣು ಕೊಂಡನು ಬಾಲಕೃಷ್ಣನು
( ರಾಗ ಬೇಗಡೆ. ಆದಿ ತಾಳ)
ಹಣ್ಣು ಕೊಂಡನು ಬಾಲಕೃಷ್ಣನು ||ಪ||
ಹಣ್ಣು ಬೇಕು ಎಂದು
ಸಣ್ಣ ಕೃಷ್ಣನು ಬಂದು
ಕಣ್ಣೀರ ತಂದು ಬೆಣ್ಣೆ ಕಳ್ಳ ನಿಂತ ||ಅ||
ದುಡುಕು ಮಾಡಿದ ಪಿಡಿ ನೆಲ್ಲನೆ ಕೊಂಡ
ಕಡುವೇಗದಿಂದ
ಮಡದಿ ಬಳಿಗೆ ಬಂದ
ಸಡಗರದಿಂದ ಪಿಡಿ ನೆಲ್ಲನ ಕೊಟ್ಟ ||
ಇಟ್ಟಳೆ ಹಣ್ಣ ಕೃಷ್ಣನ ಕೈಯಲಿ
ಇಟ್ಟಳೆ ಮತ್ತೊಂದು
ಕೊಟ್ಟಳೆ ಮುದ್ದೊಂದು
ಪಟ್ಟಳೆ ಭಯ ಬಂದು ಕಂ-
ಗಟ್ಟಳೆ ಮನನೊಂದು ||
ದಾತ ನೋಡಿದ ನಾರಿಮಣಿಯ ಮನವ
ಆತ ತೋರಿದ
ಎಂಥಾ ಮಾಯ ಮಾಡಿದ
ನಾಥ ಕೊಟ್ಟ ನೆಲ್ಲು
ಮಣಿಗಳಾಯಿತಲ್ಲೊ ||
ತಿರುಗಿ ಪೋದನು ಮುದ್ದು ಕೃಷ್ಣನು
ತಿರುಗಿ ತಿರುಗಿ ನೋಡಿ ಮರುಳಿಗೆ
ಆಳಾಗಿ ತಿರುಗಿ
ಬಂದಳವಳು ಹಣ್ಣು ಕೂಗಿದಳು ||
ನಿನ್ನ ಹೊರತು ಅನ್ಯರನು ಕಾಣೆ
ಸಣ್ಣ ಕೃಷ್ಣ ಬಂದು
ಎನ್ನ ಸಲಹೋ ಇಂದೆ
ಘನ್ನ ಮಹಿಮ ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments