ಹಣ್ಣಿನಂತೆ ಲಕ್ಷಣ ಇರಬೇಕು
( ರಾಗ ಶಂಕರಾಭರಣ. ಛಾಪು ತಾಳ)
ಹಣ್ಣಿನಂತೆ ಲಕ್ಷಣ ಇರಬೇಕು, ಬಾಳೇ-
ಹಣ್ಣಿನ ರುಚಿಯಂತೆ ಗುಣವಿರಬೇಕು ||ಪ||
ಒಡಲನೆ ಕಟ್ಟಿ ಒಬ್ಬರಿಗಿಡಬೇಕು
ಸುಡುಗಾಡಿಗಳ ಮಾತು ನೀ ಮರೆಯಲುಬೇಕು
ನೋಡಿದರೆ ನೋಡಲಿಲ್ಲೆಂಬುದಿರಬೇಕು
ನಡತೆಗುಣದಲಿ ಪಾರ್ವತಿಸಮವಿರಬೇಕು ||
ಗತಿಯು ತನಗೆ ಪ್ರಾಣಪತಿಯೆನಬೇಕು
ಪ್ರತಿಅರುಂಧತಿ ಈಕೆ ಎನಿಸಬೇಕು
ಯತಿಗುರುಹಿರಿಯರಿಗೆರಗಿ ಸುಖಿಸಬೇಕು
ಅತಿಶಯ ಸಮುದ್ರಗಾಂಭೀರ್ಯವಿರಬೇಕು ||
ಪರತತ್ವ ಭಾವವ ತಿಳಿದಿರಬೇಕು
ಹರಿಪರದೇವತೆಯಧೀನ ಇರಬೇಕು
ವರಲಕ್ಷ್ಮಿಯಂದದಿ ದಯವಿರಬೇಕು
ಪುರಂದರವಿಠಲ ಮೆಚ್ಚಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments