ಸ್ವಾಮಿ ರಕ್ಷಿಸೋ ಶ್ರೀನಿವಾಸ

ಸ್ವಾಮಿ ರಕ್ಷಿಸೋ ಶ್ರೀನಿವಾಸ

(ರಾಗ : ಯರಕಲ ಕಾಂಬೋಧಿ ತ್ರಿವಿಡೆ ತಾಳ) ಸ್ವಾಮಿ ರಕ್ಷಿಸೋ ಶ್ರೀನಿವಾಸ ಕಾಮಿತಾರ್ಥವನೀವ ಕಾಕೋದರಾದ್ರೀಶ ||ಪ|| ನಾನಾ ಜನ್ಮದಿ ಬಂದು ನಾನಾವ್ಯಾಧಿಗಳಿಂದ ದೀನನಾದೆನೊ ದೊರೆಯೇ ನಿನ್ನ ನಂಬದಲೆ ಮುನ್ನ್ಯಾರು ಗತಿ ಎನಗೆ ಮನ್ನಿಸೈ ನೀ ಬೇಗ ಸನ್ನಾಹವೇಕಯ್ಯ ಸಣ್ಣವನ ಪೊರೆಯಲು ||೧|| ತಂದೆತಾಯಿಯು ನೀನೆ ಬಂಧುಬಳಗವು ನೀನೆ ಕಂದನು ಕಾಂತೆಯು ನೀನೆನಗೆ ಹರಿಯೇ ಅಂದಗಳು ಚಂದಗಳು ಮಂದಿರವು ಮಾಣಿಕವು ಸಂದೇಹವೇನಯ್ಯ ಸರ್ವವೂ ನೀ ಎನಗೆ ||೨|| ಅಂದು ದ್ರೌಪತಿಯು ಮತ್ತಂದು ದಂತಾವಳನು ಕಂದ ಪ್ರಹ್ಲಾದನು ಅಂದು ತಾ ಧ್ರುವನು ಚಂದದೊಳು ನಿನ್ನನ್ನು ಮಂದಮತಿಯನು ಬಿಟ್ಟು ಪೊಂದಿ ಆನಂದವ ಪಡೆಯಲಿಲ್ಲವೆ ದೇವಾ ||೩|| ಕೊಬ್ಬಿನಾ ಕಣ್ಣು ಕಾಣದೆ ನಿನ್ನ ಮರೆತೆನಯ್ಯ ಅಬ್ಬರಿಸುತಲಿರ್ಪ ಎನ್ನ ಪಾಪಗಳೀಗ ಹೆಬ್ಬುಲಿಯಂತಿರ್ಪ ಈ ವಿಷಯಾಸೆ ಕೊಲ್ಲುವುದು ಗುಬ್ಬಿಗೆ ಬೊಮ್ಮಾಸ್ತ್ರ ತೊಡದೆ ಎನ್ನ ಸಲಹಯ್ಯ ||೪|| ವೈಕುಂಠಪಟ್ಟಣವೆಂಬ ಆ ದಿವ್ಯಾಲಯದೊಳಗೆ ಸಾಕಾರದಿಂದಲಿ ರಂಜಿಸುವ ನರಹರಿಯೆ ಏಕಾಂತ ಭಕ್ತನಾದೆನೊ ನಿನ್ನ ಪಾದಕ್ಕೆ ಸಾಕಲಾರದೆ ಬಿಟ್ಟರೆ ಆರು ಮೆಚ್ಚುವರಯ್ಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು