ಸ್ನಾನವ ಮಾಡಿರೊ
(ರಾಗ ಪೂರ್ವಿ ಅಟ ತಾಳ)
ಸ್ನಾನವ ಮಾಡಿರೊ ಜ್ನಾನ ತೀರ್ಥದಲ್ಲಿ
ನಾನು ನೀನೆಂಬಹಂಕಾರವ ಬಿಟ್ಟು
ತಂದೆ ತಾಯಿಗಳ ಸೇವೆ ಒಂದು ಸ್ನಾನ
ಬಂಧನದವರ ಬಿಡಿಸಲೊಂದು ಸ್ನಾನ
ಮುಂದಣ ಮಾರ್ಗ ತಿಳಿದಡೊಂದು ಸ್ನಾನ
ಇಂದಿರೇಶನ ಧ್ಯಾನವೆ ಗಂಗಾ ಸ್ನಾನ
ಪರಸತಿಯ ಬಯಸದಿದ್ದರೆ ಒಂದು ಸ್ನಾನ
ಪರರ ನಿಂದಿಸದಿರುವುದು ಒಂದು ಸ್ನಾನ
ಪರರೊಡವೆಯಪಹರಿಸದಿರೆ ಒಂದು ಸ್ನಾನ
ಪರತತ್ವ ತಿಳಿದುಕೊಂಡರೆ ಗಂಗಾಸ್ನಾನ
ತನ್ನೊಳು ತಾನೇ ತಿಳಿದರೊಂದು ಸ್ನಾನ
ಅನ್ಯಾಯ ನುಡಿಯದಿದ್ದರೆ ಒಂದು ಸ್ನಾನ
ಅನ್ಯಾಯ ಮಾಡದಿರಲು ಒಂದು ಸ್ನಾನ
ಚೆನ್ನಾಗಿ ಹರಿಯ ನೆನೆಯೆ ಗಂಗಾ ಸ್ನಾನ
ಅತ್ತೆ ಮಾವರ ಸೇವೆಯು ಒಂದು ಸ್ನಾನ
ಭರ್ತನ ಮಾತ ಕೇಳುವುದು ಒಂದು ಸ್ನಾನ
ಕ್ಷೇತ್ರಪಾತ್ರರ ಸಹವಾಸ ಒಂದು ಸ್ನಾನ
ಪಾರ್ಥಸಾರಥಿಧ್ಯಾನವೆ ಗಂಗಾ ಸ್ನಾನ
ವೇದ ಶಾಸ್ತ್ರವನೋದುವುದೊಂದು ಸ್ನಾನ
ಭೇದಾಭೇದವ ತಿಳಿದರೊಂದು ಸ್ನಾನ
ಸಾಧು ಸಜ್ಜನರ ಸಂಗ ಒಂದು ಸ್ನಾನ
ಪುರಂದರವಿಠಲನ ಧ್ಯಾನವೆ ಗಂಗಾ ಸ್ನಾನ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments
Re: ಸ್ನಾನವ ಮಾಡಿರೊ