ಸ್ಥಳವಿಲ್ಲವಯ್ಯ ಭಾಗವತರೆ
( ರಾಗ ಕಾಂಭೋಜ. ಅಟ ತಾಳ)
ಸ್ಥಳವಿಲ್ಲವಯ್ಯ ಭಾಗವತರೆ
ಒಳಗೆ ಹೊರಗೆ ಸಂದಣಿ ಭಾಳ ತುಂಬಿದೆ ||ಪ||
ಐದಕ್ಕೆ ಇದರೊಳು ಉಂಟು, ಮ-
ತ್ತೈದು ಐದು ಮಂದಿಗಳು ಬೇರುಂಟು
ಐದು ನಾಲ್ಕು ದ್ವಾರಗಳುಂಟು, ನಾವು
ಬೈದರೆ ನಿಮ್ಮದೇನು ಹೋದೀತು ಗಂಟು ||
ಆರು ಮಂದಿ ಮಕ್ಕಳುಂಟು(/ವಕ್ಕಲುಂಟು) ಮ-
ತ್ತಾರು ಮಂದಿ ಪ್ರೇರಕರುಂಟು
ಪ್ರೇರಕರಿಗೆ ಕರ್ತರುಂಟು, ವಿ-
ಚಾರ ಮಾಡಲಿಕ್ಕೆ ನಿಮ್ಮದೇನು ತಂಟು ||
ಅತ್ತೆಯೆಂಬೊಳು ಬಲು ಖೋಡಿ ಎ-
ನ್ನೊತ್ತಿ ಆಳುವ ಪುರುಷ ಹೇಡಿ
ಮತ್ತೆ ಮಾವ ಅಡನಾಡಿ, ಸರಿ-
ಹೊತ್ತಿಗೆ ಬಾಹೋನು ಮೈದುನ ಒಡಿ ||
ನೆಗಣ್ಣಿಯೆಂಬೋಳು ಮುಂಗೋಪಿ, ಮಲ-
ಮಗಳು ಕಂಡರೆ ಸೇರಳು ಮಹತಾಪಿ
ಹಗೆಗಾರತ್ತಿಗೆ ಬಲು ಕೋಪಿ, ಇದರ
ಬಗೆ ತಿಳಿಯದ ನಾದಿನಿ ಮಹಾಪಾಪಿ ||
ಎಷ್ಟು ಹೇಳಲಿ ನಿಮಗೆಲ್ಲ, ಈ
ಕಷ್ಟ ಸಂಸಾರದೊಳಗಿಷ್ಟು ಸುಖವಿಲ್ಲ
ಸೃಷ್ಟಿಗೊಡೆಯ ತಾಂ ಬಲ್ಲ, ಸೃಷ್ಟೀಶ
ದಿಟ್ಟ ಪುರಂದರವಿಠಲ ತಾಂ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments