ಸೋಮಕುಲವಾರಿನಿಧಿ
( ರಾಗ ಮುಖಾರಿ/ಸಾವೇರಿ. ಝಂಪೆ ತಾಳ)
ಸೋಮಕುಲವಾರಿನಿಧಿ ಸೋಮನುದ್ದಾಮ ರಣಧೀರ
ಜಯ ಜಯ ಭೀಮಸೇನ ಭಾಪುರೆ ||ಪ||
ಮರೆಸಿ ಕೌರವರಿತ್ತ ವಿಷವುಂಡು ತೇಗಿ ನೀ
ಉರಗಗಳ ಮೇಲೆ ಬಿಡಲವನೊರಗಿದೆ
ಸುರನದಿಯೊಳಗೆ ನೂಕೆ ಭರದಲೆದ್ದು ಖಳನ
ಮುರಿದು ಮುಟ್ಟಿಯ ಮಾಡಿದೆಲ , ಭಾಪುರೆ ||
ನರನು ಮಗಧೇಶನ ಕರೆಯೆ ನಿನ್ನನು ರಣಕೆ
ವರಸೆ ಹರಿಗಿದಿರಲಾ ಖಳನ ಮುರಿದೆ
ಧರೆಯೊಳತಿಬಲರೆನಿಪ ಕ್ರೂರ ಕೀಚಕನನುಜರ
ಪರಿಪರಿಯ ಭಂಗಪಡಿಸಿದೆಲ, ಭಾಪುರೆ ||
ನರನಮಿತ ಗುರುರಥವ ತಿರುಹಿ ನಭಕೀಡಾಡಿ
ಕುರುಭೂಪಾನುಜರ ರಕ್ತ ಸುರುಹಿದೆ
ಹರಯಶಕ್ಕಿದಿರಾದ ಗಿರೀಶನವತಾರನಾದ
ಗುರುಸುತನ ಭಂಗಪಡಿಸಿದೆಲ , ಭಾಪುರೆ ||
ದುರುಳ ದುಶ್ಯಾಸನನ ಧರೆಯ ಮೇಲಡಗೆಡಹಿ
ಎರಡು ಬಲದತಿರಥರ ಜರದರಳಲಿಸಿ
ನರಹರಿಯ ಲೀಲೆಯಿಂದವನುರವ ಬಗಿದು ಕೆಂ-
ಗರುಳ ನಿಜಸತಿಗೆ ಮುಡಿಸಿದೆಲ ಭಾಪುರೆ ||
ಕುರುಪತಿ ಯಮಜ ಪಾರ್ಥ ನಕುಲ ಸಹದೇವರನು
ಜರೆದು ( /ವರಿಸೆ) ನಿನ್ನಯ ಸಂಗರಕೆ ವರಿಸಲು
ಧರೆಯ ಭಾರಹಾರಿ ಗುರು ಪುರಂದರವಿಠಲಗಿದಿರ-
ಲಿರವಣಿಸೆ ಖಳನ ನೀ ಮುರಿದೆಲ ಭಾಪುರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments