ಸೇವಕನೆಲೊ ನಾನು
ಸೇವಕನೆಲೊ ನಾನು ನಿನ್ನಯ ಪಾದ
ಸೇವೆ ನೀಡೆಲೊ ನೀನು ||ಪಲ್ಲವಿ||
ಸೇವಕನೆಲೊ ನಾನು ಸೇವೆ ನೀಡೆಲೊ ನೀನು
ಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನು
ಗೋವರ್ಧನಧರ ದೇವ ಗೋವುಗಳ ಕಾವ
ಶ್ರೀ ಮಹಾನುಭಾವ ವರಗಳನೀವ ದೇವ
ಶ್ರೀವಲ್ಲಭ ದಯಮಾಡೆನ್ನನು ಈ ವೇಳೆಗೆ ಇಂದಿರಾರಮಣ ||ಅನುಪಲ್ಲವಿ||
ರಾಮ ದಶರಥ ನಂದನ ರಘುಕುಲಾಂಬುಧಿ ಸೋಮಸುಂದರವದನ
ವಾಮನ ಪರಿಪೂರ್ಣ ಕಾಮ ಕೌಸಲ್ಯರಾಮ
ಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮ ಶ್ರೀಮದನಂತ ನಾಮ
ಭೀಮ ಮುನಿಜನಸ್ತೋಮ ರಮ್ಯಗುಣಧಾಮ
ರಣರಂಗ ಪ್ರೇಮ ಕೋಮಲಶ್ಯಾಮ ನೇಮ
ಸಾಮಜವರದ ನೀನನುದಿನ ಕಾಮಿತ ಫಲ ಕರುಣಿಸಿ ಕಾಯೋ ||೧||
ಶಂಕರ ಸುರಸೇವಿತ ಶೇಷ ಗರುಡಾಲಂಕಾರಮಣಿ ಶೋಭಿತ
ಪಂಕಜನಯನ ಮೀನಾಂಕಜನಕ ಪಾದ
ಪಂಕಜಾಸನ ವಿನುತ ತಿರುಪತಿ ವೇಂಕಟ ಬಿರುದಾಂಕ ಜಯ ಜಯ
ಶಂಖ ಚಕ್ರ ಗಧೆ ಪಂಕಜಧರ ಅಕಳಂಕ
ಸುಚರಿತ ತಾಟಂಕಗೊಲಿದ ನಿಶ್ಕಳಂಕ
ಲಂಕಾಧಿಪಲಾಲಿಪ ರಘುಪತಿ ಕಿಂಕರರಿಗೆ ಕಿಂಕರ ನಾನೆಲೊ||೨||
ಮಂದರೋದ್ಧಾರ ಮಾಧವ ಮಧುಸೂದನ ಆನಂದ ಮಂಗಳ ವಿಗ್ರಹ
ಬಂದು ಮಾಧವ ಗೋವಿಂದ ಗೋಕುಲಾನಂದ
ವಂದಿತಾಮರ ಬೃಂದ ವೇದವ ತಂದ ತುರಗವನೇರಿ ಬಂದ
ಬೃಂದಾವನದೊಳಗಿಂದ ಯಶೋಧೆಯ ಕಂದ
ಹರಿಗೋವಿಂದ ಶೇಷಗಿರಿಯಲ್ಲಿ ನಿಂದ
ಮಂದಾಕಿನಿ ಪಡೆದೆಲೊ ಧೃವಗೊಲಿದಂದದಿ ಎನಗೊಲಿ ಹಯವದನ||೩||
------------------------------------------------------------
ಸೂಚನೆ: ಚರಣದ (೧,೨) (೩) (೪,೫) (೬) ನೆಯ ಸಾಲುಗಳನ್ನು ಬೇರೆ ಬೇರೆ ಕಾಲಗಳಲ್ಲಿ ಹಾಡುವ ಪರಿಪಾಠವಿದೆ.
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments