ಸುಲಭವಲ್ಲವೊ ಮಹಾನಂದ
( ರಾಗ ನಾದನಾಮಕ್ರಿಯೆ. ಛಾಪು ತಾಳ)
ಸುಲಭವಲ್ಲವೊ ಮಹಾನಂದ, ತನ್ನೊಳಗೆ ತಾ
ತಿಳಿಯಬೇಕು ಗುರುದಯದಿಂದ ||ಪ||
ಬೆಕ್ಕನು ಇಲಿ ನುಂಗುವ ತನಕ, ಕಡು
ರಕ್ಕಸಿಯ ಕಂಡು ಗಿಣಿ ನುಂಗುವ ತನಕ
ಮಕ್ಕಳ ಭಕ್ಷಿಸುವ ತನಕ, ಮದ
ಸೊಕ್ಕಿದ ಗಜವನ್ನು ನರಿ ನುಂಗುವ ತನಕ ||
ಇಷ್ಟದೈವತ ವಶವಾಕೋ ತನಕ, ಮೂರು
ಬೆಟ್ಟಗಳನ್ನು ನೊಣ ನುಂಗುವ ತನಕ
ಶಿಷ್ಟರೊಡನೆ ಸೇರುವ ತನಕ, ಗುಬ್ಬಿ
ಕೆಟ್ಟ ರಾಜಹಂಸನ ನುಂಗುವ ತನಕ ||
ಒಳಹೊರಗೊಂದಾಗುವ ತನಕ, ಸಾಲ
ಕಡೆ ಎಂಬುವ ಭಾವ ಬಯಲಾಗುವ ತನಕ
ಬೆಳಕಿನೊಳಗೆ ಕಾಣುವ ತನಕ, ನಮ್ಮ
ಪುರಂದರವಿಠಲನ ದಯವಾಗುವ ತನಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments