ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ
(ರಾಗ ಮಧ್ಯಮಾವತಿ ಆದಿತಾಳ)
ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ ಸುಮ್ಮನೊಲಿವನೆ? ||ಪ||
ಮಂದವಾರ ದಿವಸದಲ್ಲಿ
ಮಿಂದು ಮಡಿಯನುಟ್ಟುಕೊಂಡು ಗೋ
ವಿಂದ ಎನುತ ನಾಮವಿಕ್ಕಿ
ವಂದನೆಯ ಮಾಡದನಕ ||೧||
ಗರ್ವವನ್ನು ಉಳಿದು ಮನದಿ
ಸಾರ್ವಭೌಮನನ್ನು ನೆನೆದು
ನಿರ್ವಹಿಸಿ ಶೇಷನು ಸುತ್ತಿದ
ಪರ್ವತವನ್ನು ಏರದನಕ ||೨||
ಕಾಸು ದುಡ್ಡು ಚಕ್ರನಾಣ್ಯ
ವೀಸವುಳಿಯದಂತೆ ಬಡ್ಡಿ
ವಾಸಿಯಿಕ್ಕಿ ಗಂಟ ಕಟ್ಟಿ
ಈಸುಕೊಂಡು ಸೂಸದನಕ ||೩||
ದೇಶ ದೇಶದಿಂದ ಕಪ್ಪ
ಗಾಸಿಯಾಗದಂತೆ ತರಿಸಿ
ಕೋಶಕಿಕ್ಕಿ ಕೊಂಬ ಲಕ್ಷ್ಮಿಯ
ಈಶನನ್ನು ನೆನೆಯದನಕ ||೪||
ಗುಡವ ಕದಡಿಕೊಂಡು
ಸಂಗಡ ಕಡಲೆಯನ್ನು ನೆನೆಸಿ ಇಟ್ಟು
ಒಡೆದ ನಾರಿಕೇಳವು ಸಹಿತ
ಒಡೆಯಗೆಂದು ಇಡದ ತನಕ ||೫||
ಆಶಾಪಾಶವನ್ನು ಬಿಟ್ಟು
ದೇಶವನ್ನು ತೊಳಲಿ ಬಳಲಿ
ಕೇಶವಾದಿ ನಾಮದೊಳಗೆ
ವಾಸುದೇವನ ನೆನೆಯದನಕ ||೬||
--ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments