ಸುದ್ದಿ ಕೇಳಮ್ಮ
( ರಾಗ ಮೋಹನ . ಅಟ ತಾಳ)
ಸುದ್ದಿ ಕೇಳಮ್ಮ ಎನಗೆ ಒಂದು
ಬುದ್ಧಿ ಹೇಳಮ್ಮ ||ಪ||
ಮುದ್ರೆ ಉಂಗುರ ನೋಡು
ಮನದಲ್ಲಿ ಲೋಲಾಡುವ
ಶುದ್ಧ ಶ್ರೀರಾಮನು
ಸುಖದಲ್ಲಿರ್ಪನು ||ಅ||
ಸೂರ್ಯ ವಂಶಜರಂತೆ
ಅಯೋಧ್ಯವನಾಳುವ ಅರಸುಗಳಂತೆ
ಬಂಧುಳ್ಳ ದಶರಥನಣುಗರಂತೆ
ಪ್ರಸಿದ್ಧ ಪೆಸರು ರಾಮಲಕ್ಷುಮಣರಂತೆ ||
ಮುನಿ ಮಹಾ ಯಜ್ಞದ ರಕ್ಷಕರಂತೆ
ದನುಜರ ಕುಲದಲ್ಲಣರಂತೆ
ವನಿತೆಯ ಶಾಪ ವಿಮೋಚಕರಂತೆ
ಜನಕಭೂಪಾಲಗೆ ಜಾಮಾತರಂತೆ ||
ಶ್ರೀ ರಾಮಚಂದ್ರಗೆ ಸತಿಯು ನೀನಂತೆ
ಅರಣ್ಯದಲಿ ಪರ್ಣಶಾಲೆಯಿತ್ತಂತೆ
ಕ್ರೂರ ರಾವಣ ನಿಮ್ಮ ವಶ ಒಯ್ದನನಂತೆ
ಹಾರುವ ಜಟಾಯು ಪಕ್ಷಿ ಪೇಳಿದನಂತೆ ||
ಎಲ್ಲ ದೇಶವ ಚರಿಸುತ್ತ ಬಂದು
ಮೆಲ್ಲನೆ ಕಿಷ್ಕಿಂಧ ಪುರಿಯಲ್ಲಿ ನಿಂದು
ಬಲ್ಲಿದ ವಾಲಿಯ ಭರದಿಂದ ಕೊಂದು
ಅಲ್ಲಿ ಸುಗ್ರೀವಗೆ ಪಟ್ಟ ಕಟ್ಟಿದರಂದು ||
ನಳ ನೀಲ ಅಂಗದ ಜಾಂಬವಂತ
ದಳಪತಿ ಅಧಿಕ ಸುಗ್ರೀವ ಬಲವಂತ
ಅಳುಕದ ಕಪಿಸೇನಾ ಜಯವಂತ
ಚೆಲುವ ರಾಮದೂತ ನಾ ಹನುಮಂತ ||
ದಾಶರಥಿ ರಾಮನು ದಂಡೆತ್ತಿ ಬರುವ
ಅಸುರ ರಾವಣನ ವಂಶವ ತರಿವ
ಕುಶಲದಿ ನಿಮ್ಮನು ಕೂಡಿ ತಾನಿರುವ
ಎಸವ ಅಯೋಧ್ಯಯೊಳಗಿದ್ದು ಮೆರೆವ ||
ಧಾರಿಣಿಸುತೆ ಧ್ಯಾನಿಸಬೇಡವಮ್ಮ
ಅರವಿಂದಮುಖಿಯೆ ಅತ್ಯಾನಂದದಲಿರು
ಶ್ರೀ ರಾಮನಾಮವೆ ಶ್ರುತಿಯ ಸನ್ಮತಿಯೆ
ಪುರಂದರವಿಠಲರಾಯನರಸಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments