ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು

ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು

---ರಾಗ ಮೋಹನ (ಭೂಪ್) ಝಂಪೆತಾಳ ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು ಪರಮ ಪಾಪಿಷ್ಠ ನಾನು || ಪ|| ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ ವ್ಯರ್ಥ ನರಕಕ್ಕೆ ಗುರಿಯಾದೆನೊ ಇನ್ನು ||ಅ.ಪ|| ಕೆರೆ ಭಾವಿ ದೇವಮಂದಿರಗಳನು ಕೆಡಿಸಿ , ದಿವ್ಯ ಹಿರಿದಾಗಿ ಮನೆ ಕಟ್ಟಿದೆ ನೆರೆ ನಡೆವ ಮಾರ್ಗದೊಳು ಅರವಟ್ಟಿಗೆಗಳನು ಥರಥರದಿ ಬಿಚ್ಚಿ ತೆಗೆದೆ ಪರಮ ಸಂಭ್ರಮದಿಂದ ಅರಳಿಯ ಮರ ಕಡಿಸಿ ಕೊರೆಸಿ ಬಾಗಿಲ ಮಾಡಿದೆ ಪವನ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ ಪರಿಪರಿಯ ಸೌಖ್ಯ ಸುರಿದೆ ಮೆರೆದೆ ||೧|| ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತ ಶಶಿಮುಖಿಯೆ ಬಾರೆಂದು ಅಸವಸದಿ ಬಣ್ಣಿಸುತ ಹಸನಾಗಿ ಅವಳೊಲಿಸುತ ದಶಮಿ ಏಕಾದಶಿ ದ್ವಾದಶಿ ದಿನದಲಿ ಅಶನವೆರಡ್ಹೊತ್ತುಣ್ಣುತ ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು ಕುಸುಮಗಂಧಿಯ ರಮಿಸುತ ನಗುತ ||೨|| ಸ್ನಾನ ಸಂಧ್ಯಾನ ಅತಿ ಮೌನ ಗಾಯತ್ರಿಜಪ ಭಾನುಗರ್ಘ್ಯವನು ಕೊಡದೆ ದೀನತ್ವದಲಿ ದಾನ-ಧರ್ಮವನು ಮಾಡದೆ ಶ್ವಾನನಂದದಿ ಚರಿಸಿದೆ ಶ್ರೀನಿವಾಸನೆ ನಿನ್ನ ಆನುಪೂರ್ವಕ ಸೇವೆ ನಾನೊಂದು ಕ್ಷಣ ಮಾಡದೆ ಬ್ಯಾನೆ ಬಂದಂತಾಗೆ ಹೀನ ವಿಧವೆಯ ಕೈಯ ನಾನಾ ವಿಧಾನ್ಯ ತಿಂದೆ-ನೊಂದೆ ||೩|| ಸಾಕಲ್ಯದಿಂದ ಸಾಲಿಗ್ರಾಮಕಭಿಷೇಕಭಿಷೇಕವಾಕಳ್ಹಾಲಲಿ ಮಾಡದೆ ನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ-ಬೇಕೆಂದು ಹಾಲು ಹೊಯ್ದೆ ಕಾಕು ಬುದ್ಧಿಗಳಿಂದ ಗುಡಿಗುಡಿ ನಶ್ಯಪುಡಿ ಹಾಕಿ ಭಂಗಿಯ ಸೇದಿದೆ ಲೋಕನಿಂದಕನಾಗಿ ಪಾಪಿ ಕೈ ಹಚ್ಚಿ ಅನೇಕ ಜೂಜುಗಳಾಡಿದೆ ಬಿಡದೆ || ೪|| ಬಾದರಾಯಣ ಕೃತ ಭಾಗವತ ಕೇಳುವಲ್ಲಿ ಆದರವು ಪುಟ್ಟಲಿಲ್ಲ ವಾದಿಗಳ ಮತವಳಿದ ಮಧ್ವಸಿದ್ಧಾಂತದ ಹಾದಿಗೆ ಹೋಗಲಿಲ್ಲ ಶೋಧಿಸಿದ ಚಿನ್ನಕ್ಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ ವೇದಬಾಹ್ಯರಿಗೆರಗಿ ಅಪಸವ್ಯಮನನಾಗಿ ಓದಿಕೊಂಡೆನೊ ಇದೆಲ್ಲ ಸಲ್ಲ ||೫|| ಉತ್ತಮ ಬ್ರಾಹ್ಮಣರ ವೃತ್ತಿಯನು ಕೆಡಿಸಿ ಬ್ರಹ್ಮಹತ್ಯಗಾರನು ಎನಿಸಿದೆ ಮತ್ತೆ ಮುಂಜಿ ಮದುವೆ ಸಮಯಕ್ಕೆ ನಾ ಹೋಗಿ ಸತ್ತ ಸುದ್ದಿಯ ಪೇಳಿದೆ ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ ಕುತ್ತಿಗೆಯನು ಕೊಯಿಸಿದೆ ಹತ್ತು ಜನರೆನ್ಹೆಣಕೆ ನಿತ್ಯ ಕಲ್ಹೊಡೆಯುತಿರೆ ಮೃತ್ಯುದೇವರೆ ಎನಿಸಿದೆ ಬಿಡದೆ ||೬|| ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರೆನಗೆ ಗತಿಯೇನು ಪೇಳೊ ಕೊನೆಗೆ ಸತತ ತವಧ್ಯಾನದಲಿ ರತನಾಗಿ ಇರುವ ಸನ್ಮತಿಯ ಪಾಲಿಸಯ್ಯ ಎನಗೆ ಪತಿತ ಪಾವನನೆಂಬ ಬಿರುದು ಅವನಿಯ ಮೇಲೆ ಶ್ರುತಿ ಸಾರುತಿದೆಯೋ ಹೀಗೆ ಶಿತಿಕಂಠನುತ ಜಗನ್ನಾಥವಿಠ್ಠಲ ನಿನಗೆ ನುತಿಸಿ ಮೊರೆಹೊಕ್ಕೆ ಹರಿಯೇ ದೊರೆಯೇ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು