ಸಾಧು ಸಂಗವಾಗದ ಬಾಳು
( ರಾಗ ಯದುಕುಲಕಾಂಭೋಜ ಆದಿ ತಾಳ)
ಸಾಧು ಸಂಗವಾಗದ ಬಾಳು ಬಾಳು ಆಗದಯ್ಯ ||ಪ ||
ಸಾಧು ಸಂಗ ಎಂಬೊದಯ್ಯ
ಕ್ಷೇಮ ನಮಗೆ ನೀಡುವುದಯ್ಯ ||ಅ||
ಉದಯದಲಿ ಎದ್ದು ಹರಿಯ
ನಾಮವನ್ನು ಒದರಿಯೊದರಿ
ಸತತವು ನಿರ್ಮಲನಾಗಿ
ನಾರದವಂದ್ಯನ ಪಾಡಿ ಆಡುವಂಥ ||
ತನ್ನ ಮರೆತು ಘನ್ನಮಹಿಮನ
ಭಿನ್ನವಿಲ್ಲದ ಭಕುತಿಯಲಿ
ಚಿನ್ನಕೃಷ್ಣನ ಧ್ಯಾನದಲಿದ್ದು
ಧನ್ಯನಾಗಿ ಬಾಳುವಂಥ ||
ಪರಮ ಪುರುಷ ಕೃಷ್ಣರಾಯ
ಪರನೆಂಬ ಜ್ಞಾನದಲಿ
ಎರೆದು ಏಳು ದ್ವೇಷವ ಬಿಡು
ದುರುಳ ಆಸೆಯ ತರಿದಂಥ ||
ಆನಂದ ಆನಂದದಿಂದ
ಗೆಜ್ಜೆ ಕಟ್ಟಿ ಲಜ್ಜೆ ಬಿಡು(/ಟ್ಟು)
ಆನಂದಭಾಷ್ಪವಗೊಂಡು
ಆನಂದನಕಂದನ ಭಜಿಸುವ ||
ತಂದೆ ಪುರಂದರವಿಠಲರಾಯ
ಚಂದವಾಗಿ ಸಾಕುವ ನಮ್ಮನು
ಮಂದ ಬುದ್ಧಿಯಿಂದ ನೀವು ಮು-
ಕುಂದನ ಮರೆಯದಿರಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments