ಸಾಕು ಸಂಸಾರ ಸಜ್ಜಾಗಿಲ್ಲ

ಸಾಕು ಸಂಸಾರ ಸಜ್ಜಾಗಿಲ್ಲ

( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ) ಸಾಕು ಸಂಸಾರ ಸಜ್ಜಾಗಿಲ್ಲ ಒಲ್ಲೆ ಒಗತನವ ||ಪ || ಆರು ಮಂದಿಯು ಗಂಡರಾಳುವರು ಎನ್ನ ಆರು ಮಂದಿಗೆ ಮೂರು ಸುತರೆನಗೆ ಆರು ಮೂರೇಳ್ವರು ಭಾವ ಮೈದುನರೆಲ್ಲ ಆರೇನೆಂದರೆ ಬಿಡರು ಯಾರಿಗುಸಿರಲಮ್ಮ || ಹತ್ತು ಮಂದಿ ಬೆನ್ನ ಮುತ್ತಿಕೊಂಡಿಹರೆ ಮತ್ತೆ ಬಿಟ್ಟೇನೆಂದರೆ ಬಿಡಗೊಡರು ಅತ್ತಿಗೆ ನೆಗೆಣ್ಣೆ ಹೊತ್ತು ಹೊತ್ತಿನೊಳೆನ್ನ ನೆತ್ತಿಯೊಳ್ ಹಸ್ತವಿಟ್ಟೆನ್ನ ಸೆಣಸುವರಮ್ಮ || ಪಂಚೈವರು ಎನ್ನ ತ್ವಂಚಾ ಹಂಚ ಎಂದು ಸಂಚಿತ ಕರ್ಮನುಣಿಸುವರು ವಂಚನೆಯಳಿದ ಪ್ರಪಂಚವ ಕಳೆದಿಹ ಮಿಂಚಿನ ಪರಿಲಿ ವಿರಿಂಚಿ ಬರೆದಿಹನಮ್ಮ || ಜ್ಯೇಷ್ಟನಾಗಿಹ ಪುತ್ರ ಧರ್ಮವ ಅಗಲಿಸಿ ಭ್ರಷ್ಟ ಅತ್ತೆಯು ಮೃತ್ಯುವಾಗಿಹಳು ಮೆಟ್ಟಿನ ಹೊರಗೆ ಕಣ್ಣಿಟ್ಟು ಸಾಧುಗಳನ್ನು ದೃಷ್ಟಿಸಿ ನೋಡಲರೆಕ್ಷಣ ಬಿಡರಮ್ಮ || ಒಂಭತ್ತು ಬಾಗಿಲ ಊಳಿಗವನು ಮಾಳ್ಪ ಕುಂಭಕದ ನರಕ ಕಾವರ ದಾಳಿ ಡಂಭಕವನು ಬಿಟ್ಟಂಬಿಕ(ಗ?)ನೊಳಗೆ ಇಟ್ಟು ವಿ- ಶ್ವಂಭರ ಪುರಂದರವಿಠಲ ಧ್ಯಾನದ ಘುಟ್ಟು ||
ದಾಸ ಸಾಹಿತ್ಯ ಪ್ರಕಾರ
ಬರೆದವರು