ಸಾಕು ಸಂಸಾರ ನಮಗಿನ್ನೇತರ

ಸಾಕು ಸಂಸಾರ ನಮಗಿನ್ನೇತರ

( ರಾಗ ಆನಂದಭೈರವಿ ಆದಿತಾಳ) ಸಾಕು ಸಂಸಾರ ನಮಗಿನ್ನೇತರ ಒಗತನ ||ಪ|| ಲೋಕದೊಳಗೆ ಎನ್ನ ಬೇಕೆಂಬುವರಿಲ್ಲ ವಿವೇಕಿ ಪುರುಷ ಪರವಶನಾದರೆ ಏತರ ಸಂಸಾರ ||ಅ|| ಕಾಮವೆಂಬೊ ನೆಗೆಹೆಣ್ಣು ಎನ್ನ ಕಟ್ಟಿ ಆಳುತಾಳೆ ಕ್ರೋಧವೆಂಬೊ ಸವತಿ ಕೊಲ್ಲುತಾಳೆ , ಏತರ ಒಗತನ || ಮದವೆಂಬ ಮೈದುನ ಎನ್ನ ಒಡನೆ ನಗುತಾನೆ ಮತ್ಸರವೆಂಬ ಭಾವ ಎನ್ನ ತುಚ್ಚವು ಮಾಡುತಾನೆ, ಏತರ ಒಗತನ || ಮೋಹವೆಂಬ ಅತ್ತಿಗೆಯೆನ್ನ ಕೊಂಡು ಮುಣುಗುತಾಳೆ ಲೋಭವೆಂಬೊ ನಾದಿನಿ ಒರಸುತಾಳೆ, ಏತರ ಒಗತನ || ಅಜ್ಞಾನವೆಂಬೊ ಅತ್ತೆ ಎನ್ನ ಅಟ್ಟಿ ಬಡಿತಾಳೆ ಸುಜ್ಞಾನಿ ಮಾವ ಕುರುಡನಾದರೆ , ಏತರ ಒಗತನ || ತಾಪತ್ರಯದಲ್ಲಿ ನಾನು ತೇಲಿ ಮುಳುಗುತೇನೆ ಆಪತ್ತು ಪರಿಹರಿಸುವೆ ಪುರಂದರವಿಠಲ, ಏತರ ಒಗತನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು