ಸರ್ವಾಪರಾಧವ ಕ್ಷಮಿಸಯ್ಯ
( ರಾಗ ಶಂಕರಾಭರಣ ತ್ರಿಪುಟ ತಾಳ)
ಸರ್ವಾಪರಾಧವ ಕ್ಷಮಿಸಯ್ಯ, ಎನ್ನ
ಗರ್ವಾಂಧಕಾರವ ಬಿಡಿಸಿ ರಕ್ಷಿಸು ||ಪ ||
ಎಂದೆಂದು ಹರಿಯರ ನಿಂದಿಸಿದೆನೊ ಚೆಲ್ವ
ಚಂದನಗಂಧಿಯರೊಳು ಸರಸವಾಡಿದೆನು
ಬಂಧು ಬಂದರೆ ಎನ್ನ ಬಿಗುವ ಬಿಂಕವ ತೋರೆ
ಬಂದೋಡ್ವರೈ ಎನ್ನ ಬೇಕೆಂದು ಕೋರದೆ
ಕುಂದಕುಡ್ಮಲದಂತ ಚಂಧರದನ ಗೋ-
ವಿಂದನ ಪಾದಾರವಿಂದವ ಸ್ಮರಿಸೆನು
ಒಂದು ದಿನವು ನಾನು ಮಿಂದು ಮಡಿಯನುಟ್ಟು
ಗಂಧ ಪುಷ್ಪಾರ್ಚನೆಗಳ ಮಾಡೆನು ಎನ್ನ ||
ಅನ್ನ ದಾನವ ಮಾಡಲರಿಯೆನು ನಾ ಮುನ್ನ
ಸ್ವರ್ಣದಾನದ ಮಾತು ಸೊಗಸದು ಕಿವಿಗೆ
ಕನ್ಯಾದಾನದ ಮಾತು ಕನಸಿನಲಿ ನಾ ಕೇಳೆ
ಮುನ್ನವರಿಯದ ಮಹಾಮುಗ್ಧ ಕಾಣಯ್ಯ
ಉನ್ನತ ಗೋದಾನ ಭೂದಾನ ಮೊದಲಾದ್ದು
ಸನ್ಮತಿಯಲಿ ಕೊಟ್ಟು ಸುಖಿಸುವುದರಿಯೆನು
ಅನ್ಯಾಯವ ಮಾಡಿ ಹರಿ ನಿನ್ನ ಮರೆಹೊಕ್ಕೆ
ಬೆಣ್ಣೆ ಕಳ್ಳನೆ ಮುದ್ದು ಚಿನ್ನಕೃಷ್ಣಯ್ಯ ||
ಪಾಪಿಯರೊಳು ಅತಿಪಾಪಿಯೆಂತೆಂಬರು
ಕೋಪಿಯರೊಳು ಉಗ್ರಗೋಪಿ ನಾನೆ
ಕೋಪತಾಪದ ವ್ಯಾಧಿಯನೆಲ್ಲ ಗುಣಮಾಡಿ
ಶ್ರೀಪತಿಯೆ ನೀ ಸಲಹೋ ಕರುಣದಿ
ಈ ಪರಿಯಲಿ ಮೇಲುಕೋಟೆ ಇಂದಿರೆವರ
ಆಪದ್ಬಂಧುವೆ ಭಕ್ತರ ಘಹರನೆ
ತಾಪತ್ರಯಗಳ ಬಿಡಿಸಿ ಚೆಲ್ವರಾಯ
ಗೋಪಾಲ ಮೂರುತಿ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments