ಸತ್ಯ ಜಗತಿದು ಪಂಚಭೇದವು
(ರಾಗ ಸೌರಾಷ್ಟ್ರ ಝಂಪೆ ತಾಳ)
ಸತ್ಯ ಜಗತಿದು ಪಂಚ ಭೇದವು , ನಿತ್ಯ ಶ್ರೀ ಗೋವಿಂದನ
ಕೃತ್ಯ ತಿಳಿದು ತಾರತಮ್ಯದಿ
ಕೃಷ್ಣನಧಿಕೆಂದು ಸಾರಿರೈ
ಜೀವ ಈಶಗೆ ಭೇದ ಸರ್ವತ್ರ
ಜೀವ ಜೀವಕೆ ಭೇದವು
ಜೀವ ಜಡಕೆ ಜಡ ಜಡಕೆ ಭೇದ
ಜೀವ ಜಡ ಪರಮಾತ್ಮಗೆ
ಮಾನುಷೋತ್ತಮರಧಿಕ ಕ್ಷಿತಿಪರು
ಮನುಜ ದೇವ ಗಂಧರ್ವರು
ಪಿತೃ ಅಜಾನಜ ಕರ್ಮಜರು
ಉಕ್ತ ಶೇಷ ಶತಸ್ಥರು
ಗಣಪ ಮಿತ್ರರು ಸಪ್ತಋಷಿಗಳು
ವಹ್ನಿ ನಾರದ ವರುಣನು
ಇನಜಗೆ ಸಮ ಚಂದ್ರ ಸೂರ್ಯರು
ಮನುಸುತೆಯು ಹೆಚ್ಚು ಪ್ರವಹನು
ದಕ್ಷ ಸಮ ಅನಿರುದ್ಧ ಶಚಿ ಗುರು
ರತಿ ಸ್ವಾಯಂಭುವರಾರ್ವರು
ಪಕ್ಷ ಪ್ರಾಣನಿಗಿಂತ ಕಾಮನು
ಕಿಂಚಿದಧಿಕನು ಇಂದ್ರನು
ದೇವೇಂದ್ರನಿಂದಧಿಕ ಮಹರುದ್ರ
ರುದ್ರ ಸಮ ಶೇಷಗರುಡರು
ಗರುಡ ಶೇಷರಿಗಥಿಕರೆನಿಪರು
ದೇವಿ ಭಾರತಿ ಸರಸ್ವತಿ
ವಾಯುವಿಗೆ ಸಮರಿಲ್ಲ ಜಗದೊಳು
ವಾಯು ದೇವರೆ ಬ್ರಹ್ಮರು
ವಾಯು ಬ್ರಹ್ಮಗೆ ಕೋಟಿ ಗುಣದಿಂದ
ಅಧಿಕ ಶಕ್ತಳು ಶ್ರೀ ರಮಾ
ಅನಂತ ಗುಣದಿಂದ ಲಕುಮಿಗಿಂತ
ಅಧಿಕ ಪುರಂದರವಿಠಲನು
ಘನ ಸಮರು ಇವಗಿಲ್ಲ ಜಗದೊಳು
ಹನುಮ ಹೃತ್ಪದ್ಮ ವಾಸಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments