ಸತ್ಯದಾ ನುಡಿ ಹಿಡಿರೋ ಮನುಜರು

ಸತ್ಯದಾ ನುಡಿ ಹಿಡಿರೋ ಮನುಜರು

(ಕಾಫೀ ರಾಗ ತೀನ್ ತಾಳ) ಸತ್ಯದಾ ನುಡಿ ಹಿಡಿರೋ ಮನುಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ||ಪ|| ಸತ್ಯದಾ ನಡಿಗಿನ್ನು ಸತ್ಯ ನುಡಿಯಲುಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ತಾಡಿಸುವಂತೆ ||ಅ.ಪ|| ಕೈಯಾರ ಕೊಂಡಿನ್ನು ಬಾಯಾರಬ್ಯಾಡಿರೊ ಮೈಯೊಳಗಿಹ ಕಾವನಯ್ಯನ ಮರಿಯಬ್ಯಾಡಿ ||೧|| ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ ||೨|| ಆಶೆಯ ಕೊಟ್ಟು ನಿರಾಶೆಯ ಮಾಡಲಿಬ್ಯಾಡಿ ಮೋಸ ಮುರುಕದಿಂದ ಘಾಸಿ ಮಾಡಲುಬ್ಯಾಡಿ ||೩|| ಘಟ್ಟಿಸಿ ಒಬ್ಬರ ಹೊಟ್ಟೆ ಹೊರಿಯಬ್ಯಾಡಿ ಸಿಟ್ಟಿಲಿ ನೆಂಟರ ತುಟ್ಟಿಸಿ ಬಿಡಬ್ಯಾಡಿ ||೪|| ಗುಟ್ಟುನೊಳಿಹ ಮಾತು ತುಟ್ಟಿಗಿ ತರಬ್ಯಾಡಿ ಹೊಟ್ಟಿಲೆ ಹಡೆದವರ ಕಟ್ಟಿಗೆ ತರಬ್ಯಾಡಿ ||೫|| ಲೆತ್ತಪಗಡಿ ಆಡಿ ಹೊತ್ತುಗಳೆಯಲಿಬ್ಯಾಡಿ ತುತ್ತಕುಡಿಯೊಳಿದ್ದಾಪತ್ತಬಡಲಿಬ್ಯಾಡಿ ||೬|| ಹರಿಹರಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೊ ||೭|| ಅನ್ನ ಬೇಡಿದವಗಿಲ್ಲೆನ್ನಬ್ಯಾಡಿ ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ ||೮|| ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ ಸ್ವಾತ್ಮಸುಖದ ಸವಿ ಸೂರ್ಯಾಡಿಕೊಳಲಿಕ್ಕೆ ||೯|| ಸ್ವಹಿತ ಸುಖದ ಮಾತು ಸಾಧಿಸಿಕೊಳ್ಳಲಿಕ್ಕೆ ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಕೊಳ್ಳಿ ||೧೦||
ದಾಸ ಸಾಹಿತ್ಯ ಪ್ರಕಾರ
ಬರೆದವರು