ಸಕಲ ಸಾಧನವೆನಗೆ ಕೈಸೇರಿತು

ಸಕಲ ಸಾಧನವೆನಗೆ ಕೈಸೇರಿತು

(ರಾಗ ಮುಖಾರಿ ಝಂಪೆತಾಳ) ಸಕಲ ಸಾಧನವೆನಗೆ ಕೈಸೇರಿತು ಮುಕುತಿಯ ಮಾತಿಗೆ ಬಾರದಾ ಧನವು ||ಪ|| ಸಂಸಾರದಲಿ ಜ್ಞಾನ ಸತಿಸುತರಲಿ ಭಕ್ತಿ ಕಂಸಾರಿ ಪೂಜೆಯಲಿ ವೈರಾಗ್ಯವು ಸಂಶಯದ ಜನರಲ್ಲಿ ಸಖತನವ ಮಾಡುವೆನು ಹಿಂಸೆಪಡಿಸುವೆನು ಜನಸಂಗ ಹರಿಸಂಗ ||೧|| ವಿಷಯಂಗಳಲಿ ಧ್ಯಾನ ಲೌಕಿಕದಲಿ ಮನನ ವಶವಲ್ಲದಾ ಕಥೆಗಳಲ್ಲಿ ಮನವು ಹಸನಾಗಿ ಎಣಿಸುವ ಆ ಹಣ ಹೊನ್ನಿನಾ ಜಪವು ಬಿಸಿಲೊಳಗೆ ಚರಿಸುವುದೆ ಅದೆ ಮಹಾ ತಪವು ||೨|| ಪೀಠ ಪೂಜೆಂಬುವುದು ಲಾಜ ಚೂರಣ ಮೈಯ ಮಾಟದ ಪಯೋಧರವೆ ಕಳಶ ಪೂಜೆ ಚೂಟಿಯಲಿ ಉದರದ ಯಾತ್ರೆಯೇ ಮಹಾಯಾತ್ರೆ ಬೂಟಕದಿ ಅನೃತವನು ಪೇಳುವುದೆ ಮಂತ್ರ ||೩|| ಹೆಂಡತಿಯ ಕೊಂಡೆಯದ ಮಾತುಗಳೆ ಉಪದೇಶ ಚಂಡಕೋಪವು ಎಂಬ ಅಗ್ನಿಹೋತ್ರ ಪಂಡಿತನು ನಾನಾಗಿ ಅವಿಧೇಯರನು ಸೇರಿ ಕಂಡಕಡೆ ವಾದಿಸುವುದು ಅತಿತರ್ಕವಯ್ಯ ||೪|| ಓದಿದೆ ಎಲ್ಲಣ್ಣ ಕಲ್ಲಣ್ಣ ಎನುತಲಿ ವೇದವೆಂಬುದು ಎನಗೆ ಪಗಡೆ ಪಂಚಿ ಸಾದಿಸಿ ಈ ಪರಿಯ ಧನವನ್ನು ಕೂಡ್ಹಾಕಿ ಮೋದಿ ಹಯವದನ ವಿಠ್ಠಲ ನಿನ್ನ ಮರೆತು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು