ಸಕಲ ಗ್ರಹಬಲ ನೀನೇ ಸರಸಿಜಾಕ್ಷ
( ರಾಗ ಅಠಾಣಾ ಖಂಡ ಛಾಪು ತಾಳ)
(ರಾಗ ಕಾಂಭೋಜ , ಅಟತಾಳ)
ಸಕಲ ಗ್ರಹಬಲ ನೀನೇ ಸರಸಿಜಾಕ್ಷ
ನಿಖಿಳರಕ್ಷಕ ನೀನೇ ವಿಶ್ವವ್ಯಾಪಕನೇ ||
ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ||
ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||
ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ ಪುರಂದರವಿಟ್ಠಲನೇ
ಶ್ರುತಿಗೇ ಸಿಲುಕದ ಮಹಾಮಹಿಮನು ನೀನೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments