ಸಕಲವೆಲ್ಲವು ಹರಿಸೇವೆಯೆನ್ನಿ

ಸಕಲವೆಲ್ಲವು ಹರಿಸೇವೆಯೆನ್ನಿ

(ರಾಗ ಶಂಕರಾಭರಣ ಅಟ ತಾಳ) ಸಕಲವೆಲ್ಲವು ಹರಿ ಸೇವೆಯೆನ್ನಿ ರುಕುಮಿಣಿ ಪತಿಯಿಲ್ಲದನ್ಯವಿಲ್ಲವೆನ್ನಿ ನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ ನಡೆವುದೆಲ್ಲವು ದೇವರ ಯಾತ್ರೆಯೆನ್ನಿ ಕೊಡುವ ದಾನವ ಕಾಮಜನಕಗರ್ಪಿತವೆನ್ನಿ ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ ಹೊಸ ವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ ಕುಸುಮ ಪರಿಮಳವು ಶ್ರೀಕೃಷ್ಣಗೆನ್ನಿ ಎಸೆವ ಆಭರಣಗಳು ಯಶೋದೆನಂದನಗೆನ್ನಿ ಶಶಿಮುಖಿಯರೊಡನಾಟ ಸೊಬಗ ಗೋವಳಗೆನ್ನಿ ಆಟಪಾಟಗಳೆಲ್ಲ ಅಂತರ್ಯಾಮಿಗೆ ಎನ್ನಿ ಕೂಟ ನೋಟಗಳೆಲ್ಲ ಕಂಜನಾಭಗೆ ಎನ್ನಿ ನೀಟಾದ ವಸ್ತುಗಳು ಕೈಟಭಾಂತಕಗೆನ್ನಿ ಕೋಟಲೆ ಸಂಸಾರ ನಾಟಕಧರಗೆಯೆನ್ನಿ ನಿದ್ರೆ ಜಾಗರವು ಸಮುದ್ರಶಯನಗೆನ್ನಿ ಭದ್ರನಿಧಿ ಗಜರಾಜ ವರದಗೆನ್ನಿ ರೌದ್ರ ದಾರಿದ್ರ್ಯವು ರಾಘವನಡಿಗೆನ್ನಿ ಶ್ರೀಮುದ್ರೆಗಳ ಧಾರಣವು ಹರಿಯ ದಾಸರಿಗೆನ್ನಿ ಅಣು ರೇಣು ತೃಣ ಕಾಷ್ಠ ಪರಿಪೂರ್ಣನಹುದೆನ್ನಿ ಎಣಿಸಲಾಗದನಂತ ಮಹಿಮನೆನ್ನಿ ಸೆಣಸುವ ದೈತ್ಯರ ಗಂಡ ಪ್ರಚಂಡನೆನ್ನಿ ಫಣಿಶಾಯಿ ಪುರಂದರವಿಠಲನೆ ಪರದೈವವೆನ್ನಿ
ದಾಸ ಸಾಹಿತ್ಯ ಪ್ರಕಾರ
ಬರೆದವರು